





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ನನ್ನ ಸಮಾಧಿಯನ್ನು ವಿಗ್ರಹವನ್ನಾಗಿ ಮಾಡಬೇಡ. ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಂಡ ಜನರನ್ನು ಅಲ್ಲಾಹು ಶಪಿಸಿದ್ದಾನೆ."
Ahmadಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಸಮಾಧಿಯನ್ನು ವಿಗ್ರಹದಂತೆ ಮಾಡಬೇಡ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾರೆ. ಅಂದರೆ, ಜನರು ಅತಿಯಾಗಿ ಮಹತ್ವ ನೀಡುತ್ತಾ (ವೈಭವೀಕರಿಸುತ್ತಾ) ಮತ್ತು ಅಭಿಮುಖೀಕರಿಸಿ ಸಾಷ್ಟಾಂಗ ಮಾಡುತ್ತಾ ಆರಾಧಿಸುವ ವಿಗ್ರಹದಂತೆ ಮಾಡಬೇಡ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಗತ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಂಡ ಜನರನ್ನು ಸರ್ವಶಕ್ತನಾದ ಅಲ್ಲಾಹು ಶಪಿಸಿದ್ದಾನೆ, ಅಂದರೆ ಅವರನ್ನು ತನ್ನ ಕರುಣೆಯಿಂದ ದೂರಗೊಳಿಸಿದ್ದಾನೆ ಎಂದು ತಿಳಿಸುತ್ತಾರೆ. ಏಕೆಂದರೆ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡುವುದರಿಂದ ಜನರು ಅವುಗಳನ್ನು ಆರಾಧಿಸಲು ಮತ್ತು ಅವುಗಳ ಬಗ್ಗೆ ಮಿಥ್ಯನಂಬಿಕೆಗಳನ್ನು ಹೊಂದಲು ಕಾರಣವಾಗುತ್ತದೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಾನು ಸಹಭಾಗಿಗಳ ಅಗತ್ಯದಿಂದ ಸಂಪೂರ್ಣ ಮುಕ್ತನಾಗಿರುವವನು. ಯಾರು ಒಂದು ಕರ್ಮವನ್ನು ಮಾಡಿ ಅದರಲ್ಲಿ ನನ್ನೊಂದಿಗೆ ಇತರರನ್ನು ಸಹಭಾಗಿಯಾಗಿ ಮಾಡುತ್ತಾನೋ, ನಾನು ಅವನನ್ನು ಮತ್ತು ಅವನ ಸಹಭಾಗಿತ್ವವನ್ನು ತೊರೆದು ಬಿಡುವೆನು”.
Muslimಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಸಹಭಾಗಿಗಳ ಅಗತ್ಯದಿಂದ ಸಂಪೂರ್ಣ ಮುಕ್ತನಾಗಿದ್ದಾನೆ. ಅಂದರೆ, ಅವನಿಗೆ ಯಾವುದೇ ವ್ಯಕ್ತಿಯ ಅಥವಾ ವಸ್ತುವಿನ ಅಗತ್ಯವಿಲ್ಲ. (ಅವನು ಸಂಪೂರ್ಣ ನಿರಪೇಕ್ಷ). ಮನುಷ್ಯನು ಒಂದು ಒಳ್ಳೆಯ ಕಾರ್ಯವನ್ನು ಮಾಡಿ, ಅದನ್ನು ಅಲ್ಲಾಹನಿಗೂ ಇತರರಿಗೂ ಅರ್ಪಿಸಿದರೆ, ಅಲ್ಲಾಹು ಆ ಕಾರ್ಯವನ್ನು ಸ್ವೀಕರಿಸುವುದಿಲ್ಲ. ಅವನು ಅದನ್ನು ಆ ವ್ಯಕ್ತಿಗೇ ಮರಳಿಸಿಬಿಡುತ್ತಾನೆ. ಆದ್ದರಿಂದ, ನಾವು ಯಾವುದೇ ಕಾರ್ಯವನ್ನು ಮಾಡುವಾಗ ಅದನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಬೇಕು. (ಅದರಿಂದ ಇತರ ಯಾರ ಸಂಪ್ರೀತಿಯನ್ನೂ ಬಯಸಬಾರದು). ಏಕೆಂದರೆ, ಅಲ್ಲಾಹನ ಸಂಪ್ರೀತಿಗಾಗಿ ಮಾತ್ರ ಮಾಡಿದ ಕಾರ್ಯವನ್ನಲ್ಲದೆ ಬೇರೆ ಯಾವ ಕಾರ್ಯವನ್ನೂ ಅವನು ಸ್ವೀಕರಿಸುವುದಿಲ್ಲ.
ಜುಂದುಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಧನಕ್ಕೆ ಐದು ದಿನ ಮೊದಲು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮ ಪೈಕಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುವುದರಿಂದ ನಾನು ಅಲ್ಲಾಹನ ಮುಂದೆ ಸಂಪೂರ್ಣ ವಿಮುಕ್ತನಾಗಿದ್ದೇನೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹು ಇಬ್ರಾಹೀಮರನ್ನು ಆಪ್ತಮಿತ್ರನನ್ನಾಗಿ ಮಾಡಿಕೊಂಡಂತೆ ನನ್ನನ್ನು ಕೂಡ ಅವನ ಆಪ್ತಮಿತ್ರನನ್ನಾಗಿ ಮಾಡಿಕೊಂಡಿದ್ದಾನೆ. ನಾನು ನನ್ನ ಸಮುದಾಯದಲ್ಲಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದರೆ, ಅಬೂಬಕರ್ ರನ್ನು ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದೆ, ಎಚ್ಚರಾ! ನಿಶ್ಚಯವಾಗಿಯೂ ನಿಮಗಿಂತ ಮೊದಲಿನವರು ಅವರ ಪ್ರವಾದಿಗಳ ಮತ್ತು ಮಹಾಪುರುಷರ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳುತ್ತಿದ್ದರು. ಎಚ್ಚರಾ! ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳಬೇಡಿ. ನಾನು ನಿಮಗೆ ಅದನ್ನು ವಿರೋಧಿಸುತ್ತೇನೆ."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅಲ್ಲಾಹನ ಬಳಿ ತಮಗಿರುವ ಸ್ಥಾನಮಾನದ ಬಗ್ಗೆ ವಿವರಿಸುತ್ತಾರೆ. ಅವರು ಅಲ್ಲಾಹನ ಅತ್ಯಂತ ಆಪ್ತರ ಸ್ಥಾನವನ್ನು ತಲುಪಿದ್ದಾರೆ. ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ಕೂಡ ಈ ಸ್ಥಾನವನ್ನು ತಲುಪಿದ್ದರು. ಆದ್ದರಿಂದ ತನಗೆ ಅಲ್ಲಾಹನ ಹೊರತು ಬೇರೆ ಆಪ್ತಮಿತ್ರರು ಇರುವುದನ್ನು ಅವರು ನಿಷೇಧಿಸುತ್ತಾರೆ. ಏಕೆಂದರೆ, ಅವರ ಹೃದಯದಲ್ಲಿ ಅಲ್ಲಾಹನ ಪ್ರೀತಿ, ಗೌರವ ಮತ್ತು ಜ್ಞಾನವು ತುಂಬಿಕೊಂಡಿದೆ. ಅಲ್ಲಿ ಅಲ್ಲಾಹನ ಹೊರತು ಬೇರೆ ಯಾರಿಗೂ ಸ್ಥಳವಿಲ್ಲ. ಒಂದು ವೇಳೆ ಜನರಲ್ಲಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳಲು ಬಯಸುತ್ತಿದ್ದರೆ, ಅವರು ಅಬೂಬಕರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನೇ ಆರಿಸುತ್ತಿದ್ದರು. ನಂತರ ಅವರು ಎಲ್ಲೆ ಮೀರುವ ಪ್ರೀತಿಯ ಬಗ್ಗೆ ಎಚ್ಚರಿಕೆ ನೀಡಿದರು. ಎಲ್ಲೆ ಮೀರಿದ ಪ್ರೀತಿಯಿಂದಲೇ ಯಹೂದಿಗಳು ಮತ್ತು ಕ್ರಿಶ್ಚಿಯನ್ನರು ಅವರ ಪ್ರವಾದಿಗಳ ಹಾಗೂ ಮಹಾಪುರುಷರ ಸಮಾಧಿಗಳನ್ನು ಎಲ್ಲೆ ಮೀರಿ ಗೌರವಿಸಿದರು. ಹೀಗೆ ಅವು ಅಲ್ಲಾಹನ ಹೊರತಾಗಿ ಆರಾಧಿಸಲ್ಪಡುವ ದೇವರುಗಳಾಗಿ ಪರಿವರ್ತನೆ ಹೊಂದಿದವು; ಮತ್ತು ಅವರು ಆ ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ಹಾಗೂ ಮಠಗಳನ್ನು ನಿರ್ಮಿಸಿದರು. ನಂತರ ಅವರಂತೆ ನೀವಾಗಬಾರದು ಎಂಬ ಕಾರಣಕ್ಕೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡುವುದನ್ನು ತಮ್ಮ ಸಮುದಾಯಕ್ಕೆ ವಿರೋಧಿಸಿದರು.
ಇಬ್ನ್ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಬ್ಬ ವ್ಯಕ್ತಿ ಹೀಗೆ ಹೇಳುವುದನ್ನು ಅವರು ಕೇಳಿದರು: “ಕಅಬಾಲಯದ ಮೇಲಾಣೆ!” ಆಗ ಇಬ್ನ್ ಉಮರ್ ಹೇಳಿದರು: “ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವಂತಿಲ್ಲ. ಏಕೆಂದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.”
At-Tirmidhiಅಲ್ಲಾಹು ಅಲ್ಲದವರ ಹೆಸರಿನಲ್ಲಿ ಅಥವಾ ಅವರ ಗುಣಲಕ್ಷಣಗಳನ್ನು ಹೇಳಿ ಯಾರಾದರೂ ಆಣೆ ಮಾಡಿದರೆ ಅವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುತ್ತಿದ್ದಾರೆ ಏಕೆಂದರೆ, ಒಬ್ಬರ ಮೇಲೆ ನಾವು ಆಣೆ ಮಾಡಬೇಕಾದರೆ ನಾವು ಅವರ ಬಗ್ಗೆ ಅತಿಯಾದ ಗೌರವಭಾವವನ್ನು ಹೊಂದಿರುತ್ತೇವೆ. ಆದರೆ ಅತಿಯಾದ ಗೌರವ ಭಾವ ಇರಬೇಕಾದದು ಅಲ್ಲಾಹನಲ್ಲಿ ಮಾತ್ರ. ಆದ್ದರಿಂದ ಅಲ್ಲಾಹನ ಮೇಲೆ, ಅಥವಾ ಅವನ ಹೆಸರು ಮತ್ತು ಗುಣಲಕ್ಷಣಗಳ ಮೇಲೆ ಮಾತ್ರ ಆಣೆ ಮಾಡತಕ್ಕದ್ದು. ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವುದು ಸಣ್ಣ ಶಿರ್ಕ್ (ಬಹುದೇವತ್ವ) ಆಗಿದೆ. ಆದರೆ ಆಣೆ ಮಾಡುವವನು ಅಲ್ಲಾಹನಿಗೆ ಗೌರವ ತೋರುವಂತೆ ಅಥವಾ ಅದಕ್ಕಿಂತಲೂ ಹೆಚ್ಚು ಗೌರವವನ್ನು ತಾನು ಆಣೆ ಮಾಡುವ ವಸ್ತುವಿಗೆ ತೋರಿದರೆ, ಆಗ ಅದು ದೊಡ್ಡ ಶಿರ್ಕ್ (ಬಹುದೇವತ್ವ) ಆಗುತ್ತದೆ.
ಇಬ್ನ್ ಅಬ್ಬಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಮುಆದ್ ಬಿನ್ ಜಬಲ್ರನ್ನು ಯಮನ್ಗೆ ಕಳುಹಿಸುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಶ್ಚಯವಾಗಿಯೂ ನೀವು ಗ್ರಂಥದವರ ಬಳಿಗೆ ಹೋಗುತ್ತಿದ್ದೀರಿ. ಆದ್ದರಿಂದ ನೀವು ಅವರ ಬಳಿಗೆ ಹೋದರೆ, ಅವರನ್ನು “ಅಲ್ಲಾಹನ ಹೊರತು ಆರಾಧನೆಗೆ ಯಾರೂ ಅರ್ಹರಲ್ಲ ಮತ್ತು ನಾನು ಅಲ್ಲಾಹನ ಸಂದೇಶವಾಹಕನಾಗಿದ್ದೇನೆಂದು” ಸಾಕ್ಷಿ ವಹಿಸಲು ಆಹ್ವಾನಿಸಿರಿ. ಅವರು ನಿಮ್ಮ ಮಾತನ್ನು ಅನುಸರಿಸಿದರೆ, ಅಲ್ಲಾಹು ಅವರ ಮೇಲೆ ಹಗಲು ರಾತ್ರಿಯಲ್ಲಿ ಐದು ನಮಾಝ್ಗಳನ್ನು ಕಡ್ಡಾಯಗೊಳಿಸಿದ್ದಾನೆಂದು ತಿಳಿಸಿರಿ. ಅವರು ಅದನ್ನೂ ಅನುಸರಿಸಿದರೆ, ಅಲ್ಲಾಹನು ಅವರ ಮೇಲೆ ಝಕಾತನ್ನು ಕಡ್ಡಾಯಗೊಳಿಸಿದ್ದಾನೆಂದು ಹೇಳಿರಿ. ಅದು ಅವರಲ್ಲಿರುವ ಶ್ರೀಮಂತರಿಂದ ತೆಗೆದು ಅವರಲ್ಲಿರುವ ಬಡವರಿಗೆ ನೀಡಲಾಗುತ್ತದೆ. ಅವರು ಅದನ್ನೂ ಅನುಸರಿಸಿದರೆ, ಅವರ ಅತ್ಯುತ್ತಮ ಸಂಪತ್ತಿನ ಬಗ್ಗೆ ಎಚ್ಚರ ವಹಿಸಿರಿ. (ಅದನ್ನು ವಶಪಡಿಸಬೇಡಿ). ಅನ್ಯಾಯಕ್ಕೊಳಗಾದವನ ಪ್ರಾರ್ಥನೆಯನ್ನು ಭಯಪಡಿರಿ. ಏಕೆಂದರೆ ಅದರ ಮತ್ತು ಅಲ್ಲಾಹನ ನಡುವೆ ಯಾವುದೇ ಪರದೆ ಇರುವುದಿಲ್ಲ.”
Al-Bukhari and Muslimಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಯಮನ್ಗೆ ಧರ್ಮಪ್ರಚಾರಕರಾಗಿ ಮತ್ತು ಬೋಧಕರಾಗಿ ಕಳುಹಿಸುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ, ಅಲ್ಲಿನ ಜನತೆ ಕ್ರಿಶ್ಚಿಯನ್ನರಾಗಿರುವುದರಿಂದ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ನಂತರ ಅತ್ಯಂತ ಪ್ರಾಮುಖ್ಯವಾದ ವಿಷಯಗಳನ್ನು ಮೊದಲು ಬೋಧಿಸಬೇಕು ಎಂದು ವಿವರಿಸಿಕೊಟ್ಟರು. ಮೊದಲು ಅವರ ವಿಶ್ವಾಸವನ್ನು ಸರಿಪಡಿಸಲು, ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಮತ್ತು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಸಂದೇಶವಾಹಕರೆಂದು ಸಾಕ್ಷಿ ವಹಿಸಲು ಅವರನ್ನು ಆಹ್ವಾನಿಸಬೇಕು. ಇದರ ಮೂಲಕ ಅವರು ಇಸ್ಲಾಂ ಧರ್ಮವನ್ನು ಪ್ರವೇಶಿಸುತ್ತಾರೆ. ಅವರು ಅದನ್ನು ಅನುಸರಿಸಿದರೆ ನಮಾಝ್ ಸಂಸ್ಥಾಪಿಸಲು ಅವರಿಗೆ ಆದೇಶ ನೀಡಬೇಕು. ಏಕೆಂದರೆ, ನಮಾಝ್ ಏಕದೇವವಿಶ್ವಾಸದ ನಂತರದ ಸ್ಥಾನದಲ್ಲಿರುವ ಅತಿದೊಡ್ಡ ಕಡ್ಡಾಯ ಕಾರ್ಯವಾಗಿದೆ. ಅವರು ನಮಾಝ್ ಸಂಸ್ಥಾಪಿಸಿದರೆ, ಅವರಲ್ಲಿರುವ ಶ್ರೀಮಂತರೊಡನೆ ಅವರ ಆಸ್ತಿಯ ಒಂದು ಭಾಗವನ್ನು ಝಕಾತ್ (ಕಡ್ಡಾಯ ದಾನ) ಆಗಿ ಬಡವರಿಗೆ ನೀಡಲು ಆದೇಶಿಸಬೇಕು. ಅವರ ಅತ್ಯುತ್ತಮ ಸಂಪತ್ತನ್ನು ತೆಗೆದುಕೊಳ್ಳಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದರು. ಏಕೆಂದರೆ, ಈ ವಿಷಯದಲ್ಲಿ ಮಧ್ಯಮ ನಿಲುವನ್ನು ಪಾಲಿಸಬೇಕಾಗಿದೆ. ನಂತರ ಅನ್ಯಾಯದಿಂದ ದೂರವಿರಲು ಉಪದೇಶಿಸಿದರು. ಅನ್ಯಾಯಕ್ಕೊಳಗಾದವನು ಅವರ ವಿರುದ್ಧ ಪ್ರಾರ್ಥಿಸದಿರುವುದಕ್ಕಾಗಿ. ಏಕೆಂದರೆ, ಅನ್ಯಾಯಕ್ಕೊಳಗಾದವನ ಪ್ರಾರ್ಥನೆಗೆ ಅಲ್ಲಾಹು ಉತ್ತರ ನೀಡುತ್ತಾನೆ.
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಕ್ರೈಸ್ತರು ಮರ್ಯಮರ ಮಗನನ್ನು ಮಿತಿಮೀರಿ ಪ್ರಶಂಸಿಸಿದಂತೆ ನೀವು ನನ್ನನ್ನು ಮಿತಿಮೀರಿ ಪ್ರಶಂಸಿಸಬೇಡಿ. ಏಕೆಂದರೆ ನಾನು ಅಲ್ಲಾಹನ ಒಬ್ಬ ದಾಸ ಮಾತ್ರ. ಆದ್ದರಿಂದ ನೀವು ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಎಂದು ಹೇಳಿರಿ.”
Al-Bukhariತನ್ನನ್ನು ಪ್ರಶಂಸಿಸುವಾಗ ಮಿತಿಮೀರುವುದು ಮತ್ತು ಧರ್ಮವು ವಿಧಿಸಿದ ಎಲ್ಲೆಯನ್ನು ಮೀರುವುದು, ಅಲ್ಲಾಹನಿಗೆ ಮಾತ್ರ ಸೀಮಿತವಾಗಿರುವ ಗುಣಲಕ್ಷಣಗಳನ್ನು ಅಥವಾ ಅವನು ಮಾತ್ರ ಮಾಡುವ ಕ್ರಿಯೆಗಳನ್ನು ತನಗೆ ಸೇರಿಸಿ ಹೇಳುವುದು, ತನಗೆ ಆಗೋಚರ ಜ್ಞಾನವಿದೆಯೆಂದು ಹೇಳುವುದು, ಅಥವಾ ಅಲ್ಲಾಹನೊಂದಿಗೆ ತನ್ನನ್ನು ಕೂಡ ಕರೆದು ಪ್ರಾರ್ಥಿಸುವುದು ಮುಂತಾದ ಕ್ರಿಶ್ಚಿಯನ್ನರು ಈಸಾ ಬಿನ್ ಮರ್ಯಮ್ (ಅವರ ಮೇಲೆ ಶಾಂತಿಯಿರಲಿ) ರೊಡನೆ ಮಾಡಿದ್ದನ್ನು ತನ್ನೊಡನೆ ಮಾಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿರೋಧಿಸುತ್ತಿದ್ದಾರೆ ನಂತರ, ತಾನು ಅಲ್ಲಾಹನ ಒಬ್ಬ ದಾಸ ಮಾತ್ರ ಎಂದು ಅವರು ವಿವರಿಸುತ್ತಾರೆ. ಅವರನ್ನು ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಎಂದು ಕರೆಯಬೇಕೆಂದು ಆದೇಶಿಸುತ್ತಾರೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಜನರ ಪೈಕಿ ಪುನರುತ್ಥಾನ ದಿನ ತಮ್ಮ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರು?” ಎಂದು ಕೇಳಲಾಯಿತು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಓ ಅಬೂಹುರೈರ! ಹದೀಸಿನ ಬಗ್ಗೆ ತಮಗಿರುವ ಆಸಕ್ತಿಯನ್ನು ಕಂಡು ತಮಗಿಂತ ಮೊದಲು ಯಾರೂ ಈ ಹದೀಸಿನ ಬಗ್ಗೆ ಕೇಳಲಾರರು ಎಂದು ನಾನು ಭಾವಿಸಿದ್ದೆ. ಪುನರುತ್ಥಾನ ದಿನ ಜನರ ಪೈಕಿ ನನ್ನ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರೆಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಎಂದು ತನ್ನ ಹೃದಯ ಮತ್ತು ಮನಸ್ಸಿನಿಂದ ನಿಷ್ಕಳಂಕವಾಗಿ ಹೇಳಿದವನು.”
Al-Bukhariಪುನರುತ್ಥಾನ ದಿನ ಜನರ ಪೈಕಿ ತನ್ನ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ, ಅಂದರೆ ಅಲ್ಲಾಹನ ಹೊರತು ಯಾವುದೇ ಸತ್ಯ ಆರಾಧ್ಯರಿಲ್ಲ ಎಂದು ತನ್ನ ಹೃದಯದಿಂದ ನಿಷ್ಕಳಂಕವಾಗಿ ಹೇಳಿದವನು ಮತ್ತು ಬಹುದೇವಾರಾಧನೆ ಹಾಗೂ ತೋರಿಕೆಯಿಂದ ಮುಕ್ತನಾಗಿರುವವನು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುತ್ತಿದ್ದಾರೆ
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು(ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ. ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ನರಕವನ್ನು ಪ್ರವೇಶಿಸುತ್ತಾನೆ.”
Muslimಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ಮರಣ ಹೊಂದುವವನು, ಅವನ ಕೆಲವು ಪಾಪಗಳಿಗಾಗಿ ಅವನಿಗೆ ಶಿಕ್ಷೆ ನೀಡಲಾದರೂ ಸಹ, ಅವನು ಸ್ವರ್ಗವಾಸಿಯಾಗುತ್ತಾನೆ ಮತ್ತು ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಮರಣ ಹೊಂದುವವನು ಶಾಶ್ವತ ನರಕವಾಸಿಯಾಗುತ್ತಾನೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಿದ್ದಾರೆ
ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ತೀವ್ರವಾದಿಗಳು ನಾಶವಾದರು.” ಅವರು ಇದನ್ನು ಮೂರು ಸಲ ಹೇಳಿದರು.
Muslimಧಾರ್ಮಿಕ ಮತ್ತು ಲೌಕಿಕ ವಿಷಯಗಳಲ್ಲಿ ಹಾಗೂ ಮಾತು ಮತ್ತು ಕೆಲಸಗಳಲ್ಲಿ, ಯಾವುದೇ ಮಾರ್ಗದರ್ಶನ ಅಥವಾ ಜ್ಞಾನವಿಲ್ಲದೆ ಅತಿರೇಕಕ್ಕೆ ಹೋಗುವವರು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಕಲಿಸಿದ ಧಾರ್ಮಿಕ ಎಲ್ಲೆಯನ್ನು ಮೀರುವವರಿಗೆ ಉಂಟಾಗುವ ನಾಶ-ನಷ್ಟಗಳ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ರವರು ತಿಳಿಸುತ್ತಿದ್ದಾರೆ