





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ತಾರಿಕ್ ಬಿನ್ ಅಶೀಮ್ ಅಶ್ಜಈ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳುತ್ತಾರೋ ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುತ್ತಾರೋ, ಅವರ ಆಸ್ತಿ ಮತ್ತು ಪ್ರಾಣವು ಪವಿತ್ರವಾಗಿವೆ. ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, "ಲಾ ಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ) ಎಂದು ಸಾಕ್ಷಿವಹಿಸಿ ನಾಲಿಗೆಯಿಂದ ಉಚ್ಛರಿಸುವವರು ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುವವರು ಹಾಗೂ ಇಸ್ಲಾಂ ಧರ್ಮದ ಹೊರತು ಬೇರೆ ಎಲ್ಲಾ ಧರ್ಮಗಳಿಂದ ದೂರ ಸರಿಯುವವರು ಯಾರೋ ಅವರ ಆಸ್ತಿ ಮತ್ತು ಪ್ರಾಣವು ಇತರ ಮುಸಲ್ಮಾನರಿಗೆ ಪವಿತ್ರವಾಗಿವೆ. ನಾವು ಅವರ ಬಾಹ್ಯ ಕರ್ಮಗಳನ್ನು ನೋಡಿ ನಿರ್ಧರಿಸಬೇಕು. ಅವರ ಆಸ್ತಿ ಮತ್ತು ಪ್ರಾಣವನ್ನು ತೆಗೆಯಲು ಯಾರಿಗೂ ಅನುಮತಿಯಿಲ್ಲ. ಇಸ್ಲಾಮೀ ಕಾನೂನಿನ ಪ್ರಕಾರ ಶಿಕ್ಷೆಯ ರೂಪದಲ್ಲಿ ಅವರ ಆಸ್ತಿ ಮತ್ತು ಪ್ರಾಣವನ್ನು ತೆಗೆಯಲು ಅನುಮತಿ ನೀಡುವ ಯಾವುದಾದರೂ ಅಪರಾಧವನ್ನು ಅವರು ಮಾಡಿದ ಹೊರತು. ಪುನರುತ್ಥಾನ ದಿನದಂದು ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ. ಅವರು ಸತ್ಯವಿಶ್ವಾಸಿಗಳಾಗಿದ್ದರೆ ಅವರಿಗೆ ಪ್ರತಿಫಲವಿದೆ. ಅವರು ಕಪಟವಿಶ್ವಾಸಿಗಳಾಗಿದ್ದರೆ ಅವರಿಗೆ ಶಿಕ್ಷೆಯಿದೆ.
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಜನರು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜ್ಯೋತಿಷ್ಯರ ಬಗ್ಗೆ ಕೇಳಿದಾಗ, ಅವರು ಉತ್ತರಿಸಿದರು: "ಅವರು ಏನೂ ಅಲ್ಲ." ಜನರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಕೆಲವೊಮ್ಮೆ ಅವರು ಹೇಳುವ ಮಾತುಗಳು ಸತ್ಯವಾಗುತ್ತದೆಯಲ್ಲವೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವರು ಹೇಳಿದ ಆ ಮಾತು ಮಾತ್ರ ಸತ್ಯವಾಗಿದೆ. ಜಿನ್ನ್ಗಳು ಆ ಮಾತನ್ನು (ಆಕಾಶದಿಂದ) ಕಸಿದುಕೊಂಡು ಅವರ ಗೆಳೆಯರ (ಜ್ಯೋತಿಷಿಗಳ) ಕಿವಿಯಲ್ಲಿ ಕೋಳಿ ಕುಕ್ಕುವಂತೆ ಸದ್ದುಮಾಡುತ್ತಾ ಪಿಸುಗುಡುತ್ತಾರೆ. ಅವರು (ಜ್ಯೋತಿಷಿಗಳು) ಅದಕ್ಕೆ ನೂರಕ್ಕಿಂತಲೂ ಹೆಚ್ಚು ಸುಳ್ಳುಗಳನ್ನು ಬೆರೆಸುತ್ತಾರೆ."
Al-Bukhariಭವಿಷ್ಯದಲ್ಲಿ ನಡೆಯುವ ಸಂಗತಿಗಳನ್ನು ಹೇಳುವವರ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾದಾಗ, ಅವರು ಹೇಳಿದರು: ಅವರ ಕಡೆಗೆ ಗಮನ ನೀಡಬೇಡಿ. ಅವರ ಮಾತುಗಳನ್ನು ಸ್ವೀಕರಿಸಬೇಡಿ. ಅವರಿಗೆ ಯಾವುದೇ ಪ್ರಾಮುಖ್ಯತೆಯಿಲ್ಲ. ಜನರು ಹೇಳಿದರು: ಆದರೆ ಕೆಲವೊಮ್ಮೆ ಅವರು ಹೇಳಿದ ಮಾತು ಸತ್ಯವಾಗುತ್ತದೆಯಲ್ಲವೇ. ಇಂತಿಂತಹ ತಿಂಗಳ ಇಂತಿಂತಹ ದಿನದಲ್ಲಿ ಇಂತಿಂತಹ ಘಟನೆ ಸಂಭವಿಸುತ್ತದೆಯೆಂದು ಅವರು ಹೇಳಿದರೆ ಅವರು ಹೇಳಿದಂತೆ ಅದು ಸಂಭವಿಸುತ್ತದೆಯಲ್ಲವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಜಿನ್ನ್ಗಳು (ಯಕ್ಷ) ಆಕಾಶದಲ್ಲಿ ನಡೆಯುವ ಸಂಗತಿಗಳನ್ನು ಕದ್ದಾಲಿಸುತ್ತಾರೆ. ನಂತರ ಅಲ್ಲಿಂದ ಇಳಿದು, ತಮ್ಮ ಗೆಳೆಯರಾದ ಜ್ಯೋತಿಷಿಗಳ ಬಳಿಗೆ ಬಂದು ತಾವು ಆಲಿಸಿದ್ದನ್ನು ಅವರಿಗೆ ತಿಳಿಸುತ್ತಾರೆ. ಆಕಾಶದಿಂದ ಕದ್ದು ಕೇಳಿದ ಈ ಸತ್ಯಕ್ಕೆ ಜ್ಯೋತಿಷಿಗಳು ನೂರು ಸುಳ್ಳುಗಳನ್ನು ಬೆರೆಸುತ್ತಾರೆ.
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಮುಆದ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದಾಗ ಅವರು ಕರೆದರು: "ಓ ಮುಆದ್ ಬಿನ್ ಜಬಲ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಅವರು ಕರೆದರು: "ಓ ಮುಆದ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಹೀಗೆ ಅವರು ಮೂರು ಬಾರಿ ಕರೆದರು. ನಂತರ ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಯಾರು ತನ್ನ ಹೃದಯದಿಂದ ಪ್ರಾಮಾಣಿಕವಾಗಿ ಸಾಕ್ಷಿ ವಹಿಸುತ್ತಾನೋ ಅವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸದೇ ಇರಲಾರ." ಮುಆದ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಜನರಿಗೆ ಸಂತೋಷವಾಗುವ ಈ ಸುದ್ದಿಯನ್ನು ನಾನು ಅವರಿಗೆ ತಿಳಿಸಲೇ?" ಅವರು ಹೇಳಿದರು: "ಬೇಡ, ಅವರು ಅದರ ಮೇಲೆ ಅವಲಂಬಿತರಾಗುವರು." (ಜ್ಞಾನವನ್ನು ಬಚ್ಚಿಟ್ಟ) ಪಾಪಕ್ಕೆ ಗುರಿಯಾಗದಿರಲು ಮುಆದ್ ಮರಣದ ಸಮಯದಲ್ಲಿ ಇದನ್ನು ಜನರಿಗೆ ತಿಳಿಸಿದರು.
Al-Bukhari and Muslimಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಬಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದರು. ಆಗ ಅವರು "ಓ ಮುಆದ್" ಎಂದು ಕರೆದರು. ತಾನು ಹೇಳಲು ಹೋಗುವ ವಿಷಯದ ಪ್ರಾಮುಖ್ಯತೆಗೆ ಒತ್ತು ಕೊಡುವುದಕ್ಕಾಗಿ ಅವರು ಹೀಗೆ ಮೂರು ಬಾರಿ ಕರೆದರು. ಅವರು ಪ್ರತಿ ಬಾರಿ ಕರೆದಾಗಲೂ ಮುಆದ್, "ಲಬ್ಬೈಕ ಯಾ ರಸೂಲಲ್ಲಾಹ್ ವ ಸಅದೈಕ" ಎಂದು ಉತ್ತರಿಸುತ್ತಿದ್ದರು. ಅಂದರೆ ಓ ಪ್ರವಾದಿಯವರೇ ನಾನು ಪದೇ ಪದೇ ನಿಮ್ಮ ಕರೆಗೆ ಉತ್ತರಿಸುತ್ತೇನೆ. ನಿಮ್ಮ ಕರೆಗೆ ಉತ್ತರಿಸುವುದೇ ನನ್ನ ಸೌಭಾಗ್ಯವಾಗಿದೆ ಎಂದರ್ಥ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು: "ಲಾ ಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ) ಮತ್ತು ಮುಹಮ್ಮದ್ ರಸೂಲುಲ್ಲಾಹ್ (ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ) ಎಂದು ತನ್ನ ಹೃದಯದಿಂದ ಪ್ರಾಮಾಣಿಕವಾಗಿ, ಯಾವುದೇ ಕಾಪಟ್ಯವಿಲ್ಲದೆ ಸಾಕ್ಷಿ ವಹಿಸಿ, ನಂತರ ಅದೇ ಸ್ಥಿತಿಯಲ್ಲಿ ಮರಣಹೊಂದುವವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸುತ್ತಾನೆ." "ಜನರು ಈ ಸುದ್ದಿಯನ್ನು ಕೇಳಿ ಸಂತೋಷಪಡುವುದಕ್ಕಾಗಿ ನಾನು ಅವರಿಗೆ ಇದನ್ನು ತಿಳಿಸಲೇ ಎಂದು ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು. ಆಗ ಜನರು ಇದರ ಮೇಲೆ ಅವಲಂಬಿತರಾಗಿ ಕರ್ಮವೆಸಗುವುದನ್ನು ಕಡಿಮೆ ಮಾಡುವರೋ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಭಯಪಟ್ಟರು. ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಿಧನರಾಗುವ ತನಕ ಈ ಹದೀಸನ್ನು ಯಾರಿಗೂ ತಿಳಿಸಲಿಲ್ಲ. ಆದರೆ ಜ್ಞಾನವನ್ನು ಬಚ್ಚಿಟ್ಟ ಪಾಪಕ್ಕೆ ಗುರಿಯಾಗುವೆನೋ ಎಂಬ ಭಯದಿಂದ ಮರಣದ ಸಮಯದಲ್ಲಿ ತಿಳಿಸಿಕೊಟ್ಟರು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸರ್ವಶಕ್ತನಾದ ನಮ್ಮ ಪರಿಪಾಲಕನು (ಅಲ್ಲಾಹು) ಪ್ರತಿ ರಾತ್ರಿಯೂ, ಅದರ ಮೂರನೇ ಒಂದು ಭಾಗ ಉಳಿದಿರುವಾಗ, ಅತಿಕೆಳಗಿನ ಆಕಾಶಕ್ಕೆ ಇಳಿಯುತ್ತಾನೆ. ನಂತರ ಹೇಳುತ್ತಾನೆ: "ನನ್ನನ್ನು ಕರೆದು ಪ್ರಾರ್ಥಿಸುವವರು ಯಾರು? ಅವರಿಗೆ ನಾನು ಉತ್ತರ ನೀಡುವೆನು. ನನ್ನಲ್ಲಿ ಬೇಡುವವರು ಯಾರು? ಅವರಿಗೆ ನಾನು ನೀಡುವೆನು. ನನ್ನಲ್ಲಿ ಕ್ಷಮೆ ಕೇಳುವವರು ಯಾರು? ಅವರಿಗೆ ನಾನು ಕ್ಷಮಿಸುವೆನು."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ನಮ್ಮ ಪರಿಪಾಲಕನು (ಅಲ್ಲಾಹು) ಪ್ರತಿ ರಾತ್ರಿಯೂ, ಅದರ ಮೂರನೇ ಒಂದು ಭಾಗ ಉಳಿದಿರುವಾಗ, ಅತಿಕೆಳಗಿನ ಆಕಾಶಕ್ಕೆ ಇಳಿದು ಬರುತ್ತಾನೆ. ನಂತರ ತನ್ನನ್ನು ಕರೆದು ಪ್ರಾರ್ಥಿಸಲು ತನ್ನ ದಾಸರಿಗೆ ಒತ್ತಾಯಿಸುತ್ತಾನೆ. ಅವನನ್ನು ಕರೆದು ಪ್ರಾರ್ಥಿಸಿದವರಿಗೆ ಅವನು ಉತ್ತರ ನೀಡುತ್ತಾನೆ. ಅವರಿಗೆ ಬೇಕಾದುದನ್ನು ತನ್ನೊಡನೆ ಬೇಡಿಕೊಳ್ಳುವಂತೆ ಅವರಿಗೆ ಪ್ರೋತ್ಸಾಹಿಸುತ್ತಾನೆ. ಅವರು ಬೇಡಿದ್ದನ್ನು ಅವನು ಅವರಿಗೆ ನೀಡುತ್ತಾನೆ. ಅವರ ಪಾಪಗಳಿಗೆ ಕ್ಷಮೆ ಕೋರುವಂತೆ ಅವನು ಅವರಿಗೆ ಉತ್ತೇಜಿಸುತ್ತಾನೆ. ಅವನ ಸತ್ಯವಿಶ್ವಾಸಿ ದಾಸರಿಗೆ ಅವನು ಕ್ಷಮಿಸುತ್ತಾನೆ.
ಅಬೂ ಮರ್ಸದ್ ಗನವಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸಮಾಧಿಗಳ ಮೇಲೆ ಕೂರಬೇಡಿ ಮತ್ತು ಅವುಗಳ ಕಡೆಗೆ ನಮಾಝ್ ಮಾಡಬೇಡಿ."
Muslimಸಮಾಧಿಗಳ ಮೇಲೆ ಕೂರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ. ಅದೇ ರೀತಿ, ಸಮಾಧಿಗಳ ಕಡೆಗೆ ನಮಾಝ್ ಮಾಡುವುದನ್ನೂ ವಿರೋಧಿಸಿದ್ದಾರೆ. ಅಂದರೆ ಸಮಾಧಿಯು ಕಿಬ್ಲದ ದಿಕ್ಕಿನಲ್ಲಿರುವ ಸ್ಥಿತಿಯಲ್ಲಿ ಅದರ ಹಿಂದೆ ನಮಾಝ್ ಮಾಡುವುದು. ಏಕೆಂದರೆ ಇದು ಬಹುದೇವಾರಾಧನೆಗೆ ಕಾರಣವಾಗುತ್ತದೆ.
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮಲ್ಲಿ ಯಾರಾದರೂ ಒಂದು ಕೆಡುಕನ್ನು ಕಂಡರೆ ಅದನ್ನು ತನ್ನ ಕೈಯಿಂದ ಬದಲಾಯಿಸಲಿ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ. ಅದು ಕೂಡ ಸಾಧ್ಯವಾಗದಿದ್ದರೆ ಹೃದಯದಿಂದ. ಅದು ಅತಿ ದುರ್ಬಲ ವಿಶ್ವಾಸವಾಗಿದೆ."
Muslimಪ್ರತಿಯೊಬ್ಬರೂ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಡುಕುಗಳನ್ನು ಬದಲಾಯಿಸಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಅಜ್ಞಾಪಿಸುತ್ತಿದ್ದಾರೆ. ಕೆಡುಕುಗಳೆಂದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರು ವಿರೋಧಿಸಿದ ಕಾರ್ಯಗಳು. ಕೆಡುಕುಗಳನ್ನು ಕಂಡರೆ ಅದನ್ನು ಕೈಯಿಂದ ಬದಲಾಯಿಸುವುದು ಕಡ್ಡಾಯವಾಗಿದೆ—ಅದು ಸಾಧ್ಯವಾದರೆ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ ಬದಲಾಯಿಸಬೇಕು. ನಾಲಿಗೆಯಿಂದ ಬದಲಾಯಿಸುವುದು ಎಂದರೆ, ಕೆಡುಕು ಮಾಡುವವನನ್ನು ಅದರಿಂದ ತಡೆಯುವುದು, ಅವನಿಗೆ ಅದರ ಹಾನಿಗಳನ್ನು ವಿವರಿಸಿಕೊಡುವುದು ಮತ್ತು ಆ ಕೆಡುಕಿನ ಬದಲು ಒಳಿತಿನ ಕಡೆಗೆ ಅವನಿಗೆ ಮಾರ್ಗದರ್ಶನ ಮಾಡುವುದು. ಇದು ಕೂಡ ಸಾಧ್ಯವಾಗದಿದ್ದರೆ ಹೃದಯದಿಂದ ಬದಲಾಯಿಸಬೇಕು. ಹೃದಯದಿಂದ ಬದಲಾಯಿಸುವುದು ಎಂದರೆ, ಕೆಡುಕನ್ನು ಅಸಹ್ಯ ಪಡುವುದು ಮತ್ತು ಸಾಧ್ಯವಾದರೆ ಅದನ್ನು (ಕೈಯಿಂದ ಅಥವಾ ನಾಲಿಗೆಯಿಂದ) ಬದಲಾಯಿಸುವೆನೆಂದು ದೃಢನಿರ್ಧಾರ ಮಾಡುವುದು. ಹೃದಯದಿಂದ ಬದಲಾಯಿಸುವುದು ಕೆಡುಕನ್ನು ಬದಲಾಯಿಸುವ ವಿಷಯದಲ್ಲಿ ಸತ್ಯವಿಶ್ವಾಸದ ಅತಿ ಕಡಿಮೆ ಮಟ್ಟವಾಗಿದೆ.
ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳಿಗಾಗಿ ನಮ್ಮನ್ನು ಶಿಕ್ಷಿಸಲಾಗುವುದೇ?" ಅವರು ಉತ್ತರಿಸಿದರು: "ಯಾರು ಇಸ್ಲಾಂ ಧರ್ಮದಲ್ಲಿ ಒಳಿತು ಮಾಡುತ್ತಾನೋ, ಅವನನ್ನು ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುವುದಿಲ್ಲ. ಆದರೆ ಯಾರು ಇಸ್ಲಾಂ ಧರ್ಮದಲ್ಲಿ ಕೆಡುಕು ಮಾಡುತ್ತಾನೋ, ಅವನನ್ನು ಹಿಂದಿನ ಮತ್ತು ನಂತರದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುತ್ತದೆ."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದರ ಶ್ರೇಷ್ಠತೆಯನ್ನು ವಿವರಿಸುತ್ತಿದ್ದಾರೆ. ಅಂದರೆ ಒಬ್ಬ ವ್ಕಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ನಂತರ ಇಸ್ಲಾಂ ಧರ್ಮದಲ್ಲಿ ನಿಷ್ಕಳಂಕತೆ ಮತ್ತು ಪ್ರಾಮಾಣಿಕತೆಯೊಂದಿಗೆ ಒಳ್ಳೆಯ ಕರ್ಮಗಳನ್ನು ಮಾಡಿದರೆ, ಅಜ್ಞಾನ ಕಾಲದಲ್ಲಿ (ಇಸ್ಲಾಮೀ ಪೂರ್ವ ಕಾಲದಲ್ಲಿ) ಮಾಡಿದ ಪಾಪಗಳು ಮತ್ತು ದುಷ್ಕರ್ಮಗಳಿಗಾಗಿ ಅವನು ವಿಚಾರಣೆ ಎದುರಿಸಬೇಕಾಗಿ ಬರುವುದಿಲ್ಲ. ಆದರೆ ಒಬ್ಬ ವ್ಯಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ಕೆಟ್ಟ ಕೃತ್ಯಗಳನ್ನು ಮಾಡಿದರೆ, ಅಂದರೆ ಅವನು ಕಪಟ ವಿಶ್ವಾಸಿಯಾದರೆ ಅಥವಾ ಧರ್ಮಪರಿತ್ಯಾಗಿಯಾದರೆ, ಅವನು ಸತ್ಯನಿಷೇಧದಲ್ಲಿದ್ದಾಗ ಮಾಡಿದ ದುಷ್ಕರ್ಮಗಳಿಗೆ ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ಮಾಡಿದ ದುಷ್ಕರ್ಮಗಳಿಗೆ ವಿಚಾರಣೆ ಎದುರಿಸಬೇಕಾಗುತ್ತದೆ.
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಾನು ಐದು ವೇಳೆಯ ಕಡ್ಡಾಯ ನಮಾಝ್ಗಳನ್ನು ನಿರ್ವಹಿಸಿದರೆ, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಿದರೆ, ಧರ್ಮಸಮ್ಮತವಾಗಿರುವುದನ್ನು ಧರ್ಮಸಮ್ಮತವೆಂದು ಮತ್ತು ಧರ್ಮನಿಷಿದ್ಧವಾಗಿರುವುದನ್ನು ಧರ್ಮನಿಷಿದ್ಧವೆಂದು ಪರಿಗಣಿಸಿದರೆ, ಮತ್ತು ಇವುಗಳಿಗಿಂತ ಹೆಚ್ಚು ಏನೂ ನಿರ್ವಹಿಸದಿದ್ದರೆ, ನಾನು ಸ್ವರ್ಗಕ್ಕೆ ಹೋಗುವೆನೇ?" ಅವರು ಉತ್ತರಿಸಿದರು: "ಹೌದು." ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ನಾನು ಅವುಗಳಿಗಿಂತ ಏನೂ ಹೆಚ್ಚಿಸುವುದಿಲ್ಲ."
Muslimಈ ಹದೀಸ್ನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಒಬ್ಬ ವ್ಯಕ್ತಿ ಯಾವುದೇ ಐಚ್ಛಿಕ ನಮಾಝ್ಗಳನ್ನು ನಿರ್ವಹಿಸದೆ ಕೇವಲ ಐದು ವೇಳೆಯ ಕಡ್ಡಾಯ ನಮಾಝ್ಗಳನ್ನು ಮಾತ್ರ ನಿರ್ವಹಿಸಿದರೆ, ಮತ್ತು ಯಾವುದೇ ಐಚ್ಚಿಕ ಉಪವಾಸಗಳನ್ನು ಆಚರಿಸದೆ ಕೇವಲ ರಮದಾನ್ ತಿಂಗಳಲ್ಲಿ ಮಾತ್ರ ಉಪವಾಸ ಆಚರಿಸಿದರೆ, ಮತ್ತು ಧರ್ಮಸಮ್ಮತವಾಗಿರುವುದನ್ನು ಧರ್ಮಸಮ್ಮತವೆಂದು ಪರಿಗಣಿಸಿ ಅವುಗಳನ್ನು ನಿರ್ವಹಿಸಿದರೆ, ಮತ್ತು ಧರ್ಮನಿಷಿದ್ಧವಾಗಿರುವುದನ್ನು ಧರ್ಮನಿಷಿದ್ಧವೆಂದು ಪರಿಗಣಿಸಿ, ಅವುಗಳಿಂದ ದೂರ ಸರಿದರೆ, ಅವನು ಖಂಡಿತವಾಗಿಯೂ ಸ್ವರ್ಗಕ್ಕೆ ಹೋಗುತ್ತಾನೆ.
ಅಬೂ ಮಾಲಿಕ್ ಅಶ್ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ. ನಮಾಝ್ ಬೆಳಕಾಗಿದೆ, ದಾನವು ಪುರಾವೆಯಾಗಿದೆ, ತಾಳ್ಮೆಯು ಪ್ರಕಾಶವಾಗಿದೆ, ಮತ್ತು ಕುರ್ಆನ್ ನಿನ್ನ ಪರವಾಗಿ ಅಥವಾ ನಿನಗೆ ವಿರುದ್ಧವಾಗಿರುವ ಪುರಾವೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಬೆಳಗಾಗುತ್ತಲೇ ತನ್ನ ಆತ್ಮವನ್ನು ಮಾರಾಟ ಮಾಡುತ್ತಾನೆ. ನಂತರ ಅವನು ಅದನ್ನು ಸ್ವತಂತ್ರಗೊಳಿಸುತ್ತಾನೆ ಅಥವಾ ನಾಶಗೊಳಿಸುತ್ತಾನೆ."
Muslimಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ: ವುದೂ (ಅಂಗಸ್ನಾನ) ಮತ್ತು ಸ್ನಾನದಿಂದ ಬಾಹ್ಯ ಶುದ್ಧೀಕರಣ ಉಂಟಾಗುತ್ತದೆ. ಇದು ನಮಾಝ್ ಸಿಂಧುವಾಗಲು ಷರತ್ತಾಗಿದೆ. 'ಅಲ್-ಹಮ್ದುಲಿಲ್ಲಾಹ್' ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. 'ಅಲ್-ಹಮ್ದುಲಿಲ್ಲಾಹ್' ಅಲ್ಲಾಹನ ಪ್ರಶಂಸೆ ಮತ್ತು ಅವನ ಸಂಪೂರ್ಣ ಗುಣಲಕ್ಷಣಗಳ ವರ್ಣನೆಯಾಗಿದೆ. ಪರಲೋಕದಲ್ಲಿ ಅದನ್ನು ತೂಗುವಾಗ ಅದು ಕರ್ಮಗಳ ತಕ್ಕಡಿಯನ್ನು ತುಂಬುತ್ತದೆ. 'ಸುಬ್ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್' ಎಂಬ ವಚನವು ಅಲ್ಲಾಹನನ್ನು ಯಾವುದೇ ಕುಂದು ಕೊರತೆಗಳಿಲ್ಲದ ಪರಿಶುದ್ಧನೆಂದು ಪ್ರಶಂಸಿಸುವುದು ಮತ್ತು ಅವನಲ್ಲಿರುವ ಪ್ರೀತಿ ಗೌರವಗಳ ಸಹಿತ, ಅವನಿಗೆ ಹೊಂದಿಕೆಯಾಗುವಂತೆ ಸಂಪೂರ್ಣತೆಯ ಗುಣಲಕ್ಷಣಗಳಿಂದ ಅವನನ್ನು ವರ್ಣಿಸುವುದಾಗಿದೆ. ಇದು ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತದೆ. ನಮಾಝ್ ಮನುಷ್ಯನ ಹೃದಯದಲ್ಲಿ, ಮುಖದಲ್ಲಿ ಮತ್ತು ಸಮಾಧಿಯಲ್ಲಿ ಹಾಗೆಯೇ ಪರಲೋಕದಲ್ಲಿ ಅವನನ್ನು ಒಟ್ಟುಗೂಡಿಸುವಾಗ ಅವನಲ್ಲುಂಟಾಗುವ ಬೆಳಕಾಗಿದೆ. ದಾನವು ಪುರಾವೆಯಾಗಿದೆ. ಅದು ಸತ್ಯವಿಶ್ವಾಸಿಯ ವಿಶ್ವಾಸವು ಸತ್ಯವೆಂಬುದಕ್ಕೆ ಪುರಾವೆಯಾಗಿದೆ. ಅದು ಸತ್ಯವಿಶ್ವಾಸಿಯನ್ನು ಕಪಟ ವಿಶ್ವಾಸಿಯಿಂದ ಬೇರ್ಪಡಿಸುತ್ತದೆ. ಏಕೆಂದರೆ ಕಪಟವಿಶ್ವಾಸಿ ದಾನ ಮಾಡುವುದಿಲ್ಲ ಮತ್ತು ಅದರ ಪ್ರತಿಫಲದಲ್ಲಿ ಅವನಿಗೆ ನಂಬಿಕೆಯಿರುವುದಿಲ್ಲ. ತಾಳ್ಮೆಯು ಪ್ರಕಾಶವಾಗಿದೆ. ತಾಳ್ಮೆ ಎಂದರೆ ಮನಸ್ಸನ್ನು ಕೆದಡದಂತೆ ಮತ್ತು ಕೋಪಗೊಳ್ಳದಂತೆ ನಿಯಂತ್ರಿಸುವುದು. ತಾಳ್ಮೆಯು ಸೂರ್ಯ ಪ್ರಕಾಶದಂತೆ ಶಾಖ ಮತ್ತು ಸುಡುವ ಗುಣವನ್ನು ಹೊಂದಿದೆ. ತಾಳ್ಮೆಯಿಂದಿರುವುದು ಬಹಳ ಕಷ್ಟ. ಅದಕ್ಕೆ ಆತ್ಮಪರಿಶ್ರಮ ಮತ್ತು ಆತ್ಮವನ್ನು ಮೋಹಗಳಿಂದ ನಿಯಂತ್ರಿಸಬೇಕಾದ ಅಗತ್ಯವಿದೆ. ತಾಳ್ಮೆಯನ್ನು ಮೈಗೂಡಿಸಿಕೊಂಡ ವ್ಯಕ್ತಿಯಲ್ಲಿ ಪ್ರಭೆಯಿರುತ್ತದೆ, ಅವನು ಸನ್ಮಾರ್ಗದಲ್ಲಿ ಮತ್ತು ಸರಿಯಾದ ಮಾರ್ಗದಲ್ಲಿರುತ್ತಾನೆ. ತಾಳ್ಮೆಯಲ್ಲಿ ಮೂರು ವಿಧಗಳಿವೆ: ಅಲ್ಲಾಹನ ಆಜ್ಞೆಗಳನ್ನು ಪಾಲಿಸುವಾಗ ತಾಳ್ಮೆ ವಹಿಸುವುದು, ಅವನು ವಿರೋಧಿಸಿದ ಕಾರ್ಯಗಳಿಂದ ದೂರವಾಗುವಾಗ ತಾಳ್ಮೆ ವಹಿಸುವುದು, ಮತ್ತು ಇಹಲೋಕದಲ್ಲಿ ಕಷ್ಟಗಳು ಮತ್ತು ವಿಪತ್ತುಗಳು ಎದುರಾಗುವಾಗ ತಾಳ್ಮೆ ವಹಿಸುವುದು. ನೀನು ಕುರ್ಆನನ್ನು ಪಠಿಸಿ, ಅದರಂತೆ ನಡೆದರೆ ಅದು ನಿನ್ನ ಪರವಾಗಿ ಸಾಕ್ಷಿ ಹೇಳುತ್ತದೆ. ಆದರೆ, ನೀನು ಅದನ್ನು ಪಠಿಸದೆ, ಅದರಂತೆ ನಡೆಯದಿದ್ದರೆ ಅದು ನಿನಗೆ ವಿರುದ್ಧವಾಗಿ ಸಾಕ್ಷಿ ಹೇಳುತ್ತದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದೇನೆಂದರೆ, ಮನುಷ್ಯರೆಲ್ಲರೂ ಬೆಳಗ್ಗೆ ಹಾಸಿಗೆಯಿಂದ ಎದ್ದು ತಮ್ಮ ಜೀವನೋಪಾಯವನ್ನು ಹುಡುಕುತ್ತಾ ವಿವಿಧ ಕೆಲಸ ಮತ್ತು ಉದ್ಯೋಗಗಳಿಗಾಗಿ ಮನೆಯಿಂದ ಹೊರಟು ಹೋಗುತ್ತಾರೆ. ಅವರಲ್ಲಿ ಅಲ್ಲಾಹನ ಆಜ್ಞಾಪಾಲನೆ ಮಾಡುತ್ತಾ ನೇರ ಮಾರ್ಗದಲ್ಲಿದ್ದು ತಮ್ಮ ಆತ್ಮವನ್ನು ನರಕದಿಂದ ಮುಕ್ತಿಗೊಳಿಸುವವರಿದ್ದಾರೆ. ಹಾಗೆಯೇ ಸನ್ಮಾರ್ಗದಿಂದ ತಪ್ಪಿ ಅಲ್ಲಾಹನ ಆಜ್ಞೆಗಳನ್ನು ಉಲ್ಲಂಘಿಸುತ್ತಾ ತಮ್ಮ ಆತ್ಮವನ್ನು ನಾಶಗೊಳಿಸಿ ನರಕ ಸೇರುವವರೂ ಇದ್ದಾರೆ.