





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಅಬೂ ಅಯ್ಯೂಬ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತನ್ನ (ಮುಸಲ್ಮಾನ) ಸಹೋದರನೊಂದಿಗೆ ಮೂರು ರಾತ್ರಿಗಳಿಗಿಂತ ಹೆಚ್ಚು ಮಾತನಾಡದೆ ಇರಲು ಯಾರಿಗೂ ಅನುಮತಿಯಿಲ್ಲ. ಅವರಿಬ್ಬರು ಎದುರಾಗುವಾಗ ಒಬ್ಬ ಆ ಕಡೆ ಮತ್ತು ಇನ್ನೊಬ್ಬ ಈ ಕಡೆ ಮುಖ ತಿರುಗಿಸುತ್ತಾನೆ. ಅವರಲ್ಲಿ ಮೊದಲು ಸಲಾಮ್ ಹೇಳುವವನೇ ಅತ್ಯುತ್ತಮನು.”
Al-Bukhari and Muslimಮೂರು ರಾತ್ರಿಗಿಂತ ಹೆಚ್ಚು ತನ್ನ ಮುಸ್ಲಿಂ ಸಹೋದರನೊಂದಿಗೆ ಸಿಟ್ಟು ಮಾಡಿಕೊಳ್ಳುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿರೋಧಿಸಿದ್ದಾರೆ. ಅವರಿಬ್ಬರು ಭೇಟಿಯಾಗುವಾಗ ಯಾರೂ ಸಲಾಂ ಹೇಳುವುದಿಲ್ಲ ಮತ್ತು ಮಾತನಾಡುವುದಿಲ್ಲ. ಸಿಟ್ಟು ಮಾಡಿಕೊಂಡಿರುವ ಇವರಿಬ್ಬರಲ್ಲಿ ಸಿಟ್ಟನ್ನು ಕೊನೆಗೊಳಿಸಿ ಮೊದಲು ಸಲಾಂ ಹೇಳುವವನೇ ಅತಿಶ್ರೇಷ್ಠನು. ಸಿಟ್ಟು ಎಂಬುದರ ಮೂಲಕ ಇಲ್ಲಿ ಉದ್ದೇಶಿಸಿರುವುದು ವೈಯಕ್ತಿಕ ಉದ್ದೇಶಕ್ಕಾಗಿರುವ ಸಿಟ್ಟನ್ನಾಗಿದೆ. ಆದರೆ ಅಲ್ಲಾಹನಿಗಾಗಿ ಸಿಟ್ಟು ಮಾಡಿಕೊಳ್ಳುವುದು, ಅಂದರೆ ಪಾಪಿಗಳು, ನೂತನವಾದಿಗಳು, ದುಷ್ಕರ್ಮಿಗಳು ಮುಂತಾದವರೊಡನೆ ಸಿಟ್ಟು ಮಾಡಿಕೊಳ್ಳುವುದಕ್ಕೆ ಸಮಯದ ಮಿತಿಯಿಲ್ಲ. ಇದು ಒಳಿತಿನ ದೃಷ್ಟಿಯಿಂದ ಮಾಡಿಕೊಳ್ಳುವ ಸಿಟ್ಟಾಗಿದ್ದು, ಸಿಟ್ಟಿನ ಕಾರಣವು ನಿವಾರಣೆಯಾದರೆ ಸಿಟ್ಟು ನಿವಾರಣೆಯಾಗುತ್ತದೆ.
ಅಬೂ ಸಿರ್ಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಇತರರಿಗೆ ತೊಂದರೆ ಕೊಡುತ್ತಾನೋ ಅವನಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ. ಯಾರು ಇತರರಿಗೆ ಕಷ್ಟಗೊಳಿಸುತ್ತಾನೋ ಅವನಿಗೆ ಅಲ್ಲಾಹು ಕಷ್ಟಗೊಳಿಸುತ್ತಾನೆ."
Ibn Maajahಮುಸಲ್ಮಾನರಿಗೆ ದೈಹಿಕ, ಆರ್ಥಿಕ, ಕೌಟುಂಬಿಕ ಮುಂತಾದ ಯಾವುದೇ ವಿಧದಲ್ಲಾದರೂ ತೊಂದರೆ ಕೊಡುವುದು ಅಥವಾ ಕಷ್ಟಗೊಳಿಸುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಸುತ್ತಿದ್ದಾರೆ. ಯಾರಾದರೂ ಅದನ್ನು ಮಾಡಿದರೆ ಅವರ ಮಾಡಿದಂತೆಯೇ ಅಲ್ಲಾಹು ಕೂಡ ಅವರಿಗೆ ಪ್ರತಿಫಲ ಮತ್ತು ಶಿಕ್ಷೆಯನ್ನು ನೀಡುತ್ತಾನೆ.
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಅಕ್ರಮವೆಸಗುವವನಿಗೆ ಸಮಯಾವಕಾಶವನ್ನು ನೀಡುತ್ತಾನೆ. ಆದರೆ ಅವನು ಅವನನ್ನೇನಾದರೂ ಹಿಡಿದುಬಿಟ್ಟರೆ, ನಂತರ ಅವನನ್ನು ಬಿಟ್ಟುಬಿಡುವುದಿಲ್ಲ." ನಂತರ ಅವರು ಈ ವಚನವನ್ನು ಪಠಿಸಿದರು: "ಅಕ್ರಮವೆಸಗುತ್ತಿರುವ ಊರುಗಳನ್ನು ಹಿಡಿಯುವಾಗ ತಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಹೀಗೆಯೇ ಆಗಿರುತ್ತದೆ. ನಿಶ್ಚಯವಾಗಿಯೂ ಅವನ ಹಿಡಿತವು ವೇದನಾಭರಿತ ಮತ್ತು ಕಠೋರವಾಗಿದೆ." [ಸೂರ ಹೂದ್: 102]
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಪಾಪಗಳು, ಬಹುದೇವರಾಧನೆ, ಜನರಿಗೆ ಅವರ ಹಕ್ಕುಗಳನ್ನು ನೀಡದೆ ಅನ್ಯಾಯವೆಸಗುವುದು ಮುಂತಾದವುಗಳಲ್ಲಿ ನಿರತರಾಗಿರುವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅಂತಹ ಅಕ್ರಮಿಗಳಿಗೆ ಸರ್ವಶಕ್ತನಾದ ಅಲ್ಲಾಹು ಅವರ ಆಯುಷ್ಯ ಮತ್ತು ಆಸ್ತಿಯಲ್ಲಿ ಇನ್ನಷ್ಟು ಹೆಚ್ಚಿಸಿ ಕೊಡುತ್ತಾನೆ, ಅವರಿಗೆ ಶಿಕ್ಷೆ ನೀಡಲು ಅವನು ಆತುರ ಪಡುವುದಿಲ್ಲ. ಅವರೇನಾದರೂ ತಮ್ಮ ತಪ್ಪುಗಳನ್ನು ಒಪ್ಪಿ ಪಶ್ಚಾತಾಪ ಪಡದಿದ್ದರೆ ಅವನು ಅವರನ್ನು ಹಿಡಿದು ಶಿಕ್ಷಿಸುತ್ತಾನೆ. ಅವರ ಅನ್ಯಾಯಗಳ ಹೆಚ್ಚಳದಿಂದಾಗಿ ಅವನು ಅವರನ್ನು ಶಿಕ್ಷಿಸದೆ ಬಿಟ್ಟು ಬಿಡುವುದಿಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ಅಕ್ರಮವೆಸಗುತ್ತಿರುವ ಊರುಗಳನ್ನು ಹಿಡಿಯುವಾಗ ತಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಹೀಗೆಯೇ ಆಗಿರುತ್ತದೆ. ನಿಶ್ಚಯವಾಗಿಯೂ ಅವನ ಹಿಡಿತವು ವೇದನಾಭರಿತ ಮತ್ತು ಕಠೋರವಾಗಿದೆ." [ಸೂರ ಹೂದ್: 102]
ಅಬೂ ಹಯ್ಯಾಜ್ ಅಸದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲೀ ಬಿನ್ ಅಬೂ ತಾಲಿಬ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ನನ್ನೊಂದಿಗೆ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಕಳುಹಿಸಿದ ಅದೇ ಕೆಲಸಕ್ಕಾಗಿ ನಾನು ತಮ್ಮನ್ನು ಕಳುಹಿಸಲೇ? ತಾವು ಒಂದೇ ಒಂದು ಪ್ರತಿಮೆಯನ್ನು ಅಳಿಸದೆ ಬಿಡಬಾರದು ಮತ್ತು ಎತ್ತರಿಸಲ್ಪಟ್ಟ ಒಂದೇ ಒಂದು ಸಮಾಧಿಯನ್ನು ನೆಲಸಮ ಮಾಡದೆ ಬಿಡಬಾರದು."
Muslimಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಡಿಗರಿಗೆ (ಸಹಾಬಿಗಳಿಗೆ) ಆದೇಶಿಸುವುದೇನೆಂದರೆ, ಯಾವುದೇ ಪ್ರತಿಮೆಯನ್ನು — ಅಂದರೆ ಆತ್ಮವಿರುವ ಜೀವಿಯ ಮೂರ್ತ ಅಥವಾ ಅಮೂರ್ತ ರೂಪ — ತೊಲಗಿಸದೆ ಅಥವಾ ಅಳಿಸಿಹಾಕದೆ ಬಿಡಬಾರದು. ಅದೇ ರೀತಿ, ಎತ್ತರಿಸಿ ಕಟ್ಟಲಾಗಿರುವ ಸಮಾಧಿಯನ್ನು ನೆಲಸಮಗೊಳಿಸದೆ ಮತ್ತು ಅದರ ಮೇಲೆ ಕಟ್ಟಲಾಗಿರುವುದನ್ನು ದ್ವಂಸಗೊಳಿಸದೆ ಬಿಡಬಾರದು; ಅಥವಾ ಸಮಾಧಿಯು ಭೂಮಿಯಿಂದ ಒಂದು ಗೇಣು ಮಾತ್ರ ಎತ್ತರವಾಗಿರುವಂತೆ ಮಾಡಬೇಕು.
ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶಕುನ ನೋಡುವವನು, ಶಕುನ ನೋಡಿಸುವವನು, ಭವಿಷ್ಯ ನೋಡುವವನು (ಜ್ಯೋತಿಷಿ), ಭವಿಷ್ಯ ನೋಡಿಸುವವನು, ಮಾಟಮಾಡುವವನು, ಮಾಟ ಮಾಡಿಸುವವನು, ಗಂಟು ಕಟ್ಟುವವನು ಮುಂತಾದವರು ನಮ್ಮಲ್ಲಿ ಸೇರಿದವರಲ್ಲ. ಯಾರು ಜ್ಯೋತಿಷಿಯ ಬಳಿಗೆ ಹೋಗಿ ಅವನು ಹೇಳಿದ ಮಾತಿನಲ್ಲಿ ನಂಬಿಕೆಯಿಡುತ್ತಾನೋ ಅವನು ಮುಹಮ್ಮದರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವತೀರ್ಣವಾದ ಸಂದೇಶವನ್ನು ನಿಷೇಧಿಸಿದ್ದಾನೆ."
Al-Bazzaarಕೆಲವು ಕಾರ್ಯಗಳನ್ನು ಮಾಡುವವರು "ಅವರು ನಮ್ಮಲ್ಲಿ ಸೇರಿದವರಲ್ಲ" ಎಂದು ಹೇಳುವ ಮೂಲಕ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಅವು ಹೀಗಿವೆ: ಮೊದಲನೆಯದು: ಶಕುನ ನೋಡುವವನು ಅಥವಾ ಶಕುನ ನೋಡಿಸುವವನು. ಶಕುನ ನೋಡುವುದು ಎಂದರೆ ಪ್ರಯಾಣಕ್ಕೆ ಹೊರಟಾಗ ಅಥವಾ ವ್ಯಾಪಾರ ಮುಂತಾದ ಕೆಲಸಗಳನ್ನು ಪ್ರಾರಂಭಿಸುವಾಗ ಹಕ್ಕಿಯನ್ನು ಹಾರಿಸಿ ಶುಭ ಮತ್ತು ಅಶುಭವನ್ನು ನಿರ್ಧರಿಸುವುದು. ಹಕ್ಕಿ ಬಲಗಡೆಗೆ ಹಾರಿದರೆ ಶುಭ ಸಂಕೇತವೆಂದು ಭಾವಿಸಿ ತಮ್ಮ ಕಾರ್ಯಗಳಲ್ಲಿ ಮುಂದುವರಿಯುವುದು ಮತ್ತು ಹಕ್ಕಿ ಎಡಗಡೆಗೆ ಹಾರಿದರೆ ಅಶುಭ ಸಂಕೇತವೆಂದು ಭಾವಿಸಿ ತಮ್ಮ ಕಾರ್ಯಗಳನ್ನು ಮೊಟಕುಗೊಳಿಸುವುದು. ಈ ರೀತಿ ಸ್ವಯಂ ಶಕುನ ನೋಡುವುದು ಅಥವಾ ಇತರರಿಂದ ನೋಡಿಸುವುದು ನಿಷಿದ್ಧವಾಗಿದೆ. ಹಕ್ಕಿಗಳು, ಪ್ರಾಣಿಗಳು, ಅಂಗವಿಕಲರು, ಸಂಖ್ಯೆಗಳು, ದಿನಗಳು ಮುಂತಾದ ದೃಶ್ಯ ಮತ್ತು ಶ್ರವ್ಯ ವಸ್ತುಗಳ ಮೂಲಕ ಶುಭ ಮತ್ತು ಅಶುಭವನ್ನು ನಿರ್ಧರಿಸುವುದು ವಿರೋಧಿಸಲಾದ ಅಪಶಕುನದಲ್ಲಿ ಒಳಪಡುತ್ತದೆ. ಎರಡನೆಯದು: ಭವಿಷ್ಯ ನೋಡುವುದು ಅಥವಾ ಭವಿಷ್ಯ ನೋಡಿಸುವುದು. ಯಾರು ನಕ್ಷತ್ರ ಮುಂತಾದವುಗಳನ್ನು ಬಳಸಿ ತನಗೆ ಭವಿಷ್ಯವು ತಿಳಿದಿದೆಯೆಂದು ವಾದಿಸುತ್ತಾನೋ, ಅಥವಾ ಜ್ಯೋತಿಷಿ ಮುಂತಾದ ಭವಿಷ್ಯ ನುಡಿಯುತ್ತೇವೆಂದು ವಾದಿಸುವವರ ಬಳಿಗೆ ಹೋಗಿ ಅವರು ಹೇಳುವ ಭವಿಷ್ಯದಲ್ಲಿ ನಂಬಿಕೆಯಿಡುತ್ತಾನೋ ಅವನು ಪ್ರವಾದಿ ಮುಹಮ್ಮದರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವತೀರ್ಣವಾದ ಸಂದೇಶವನ್ನು ನಿಷೇಧಿಸಿದ್ದಾನೆ. ಮೂರನೆಯದು: ಮಾಟ ಮಾಡುವವನು ಅಥವಾ ಮಾಟ ಮಾಡಿಸುವವನು. ಅಂದರೆ, ಇತರರಿಗೆ ಉಪಕಾರ ಅಥವಾ ತೊಂದರೆ ಮಾಡಲು ವಾಮಾಚಾರವನ್ನು ಸ್ವತಃ ಮಾಡುವವನು ಅಥವಾ ಇತರರಿಂದ ಮಾಡಿಸುವವನು; ಅಥವಾ ದಾರಕ್ಕೆ ಗಂಟು ಕಟ್ಟಿ ಅದಕ್ಕೆ ನಿಷೇಧಿಸಲಾದ ಮಂತ್ರಗಳನ್ನು ಊದಿ ವಾಮಾಚಾರ ಮಾಡುವವನು.
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಪತ್ನಿಯರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ಭವಿಷ್ಯ ನುಡಿಯುವವನ ಬಳಿಗೆ ಹೋಗಿ, ಅವನೊಡನೆ ಏನಾದರೂ ವಿಷಯದ ಬಗ್ಗೆ ಕೇಳಿದರೆ ಅವನ ನಲ್ವತ್ತು ದಿನಗಳ ನಮಾಝ್ ಸ್ವೀಕರಿಸಲ್ಪಡುವುದಿಲ್ಲ."
Muslimಭವಿಷ್ಯ ನುಡಿಯುವವರ ಬಳಿಗೆ ಹೋಗುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಕೆ ನೀಡುತ್ತಾರೆ.ಭವಿಷ್ಯ ನುಡಿಯುವವರು ಎಂಬುದು ಜ್ಯೋತಿಷಿಗಳು, ರಾಶಿಫಲ ನೋಡುವವರು, ಭೂಮಿಯಲ್ಲಿ ಗೆರೆ ಎಳೆಯುವವರು ಮುಂತಾದ ನಿರ್ದಿಷ್ಟ ವಸ್ತುಗಳನ್ನು ಬಳಸಿ ಭವಿಷ್ಯವನ್ನು ತಿಳಿಯುತ್ತೇವೆಂದು ವಾದಿಸುವವರಿಗೆ ಬಳಸುವ ಸಾಮಾನ್ಯ ಹೆಸರಾಗಿದೆ. ಭವಿಷ್ಯದ ಬಗ್ಗೆ ಅವರಲ್ಲಿ ಕೇವಲ ಪ್ರಶ್ನೆ ಕೇಳಿದರೂ ಅಲ್ಲಾಹು ಅವನ ನಲ್ವತ್ತು ದಿನಗಳ ನಮಾಝಿನ ಪ್ರತಿಫಲವನ್ನು ತಡೆಹಿಡಿಯುತ್ತಾನೆ. ಇದು ಈ ಪಾಪಕ್ಕೆ ಮತ್ತು ಮಹಾ ಅಪರಾಧಕ್ಕೆ ನೀಡಲಾಗುವ ಶಿಕ್ಷೆಯಾಗಿದೆ.
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಜ್ಯೋತಿಷ್ಯ ವಿದ್ಯೆಯನ್ನು ಗಳಿಸುತ್ತಾರೋ ಅವರು ವಾಮಾಚಾರದ ಒಂದು ಶಾಖೆಯನ್ನು ಗಳಿಸುತ್ತಾರೆ. ಅದರ ಬಗ್ಗೆ ಹೆಚ್ಚು ವಿದ್ಯೆಯನ್ನು ಗಳಿಸಿದವರು ಹೆಚ್ಚು ವಾಮಾಚಾರವನ್ನು ಗಳಿಸುತ್ತಾರೆ."
Ibn Maajahಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ ನಕ್ಷತ್ರಗಳು, ರಾಶಿಗಳು, ಅವುಗಳ ಚಲನವಲನಗಳು, ಪ್ರವೇಶ ಮತ್ತು ನಿರ್ಗಮನದ ಮೂಲಕ ಭವಿಷ್ಯದಲ್ಲಿ ಸಂಭವಿಸುವ ಜನನ, ಮರಣ, ರೋಗ ಮುಂತಾದ ಸಂಗತಿಗಳಲ್ಲಿ ಅವು ಭೂಮಿಯಲ್ಲಿರುವವರ ಮೇಲೆ ಬೀರುವ ಪರಿಣಾಮಗಳು ಮುಂತಾದವುಗಳನ್ನು ಕಲಿಯುವುದು ಅಥವಾ ಅವುಗಳ ಜ್ಞಾನವನ್ನು ಪಡೆಯುವುದು ವಾಮಾಚಾರದ ಒಂದು ಭಾಗವನ್ನು ಕಲಿಯುವುದಕ್ಕೆ ಸಮವಾಗಿದೆ; ಮತ್ತು ಈ ವಿದ್ಯೆಯನ್ನು ಹೆಚ್ಚು ಹೆಚ್ಚು ಕಲಿತರೆ ಅದು ವಾಮಾಚಾರವನ್ನು ಹೆಚ್ಚು ಹೆಚ್ಚು ಕಲಿಯುವುದಕ್ಕೆ ಸಮವಾಗಿದೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯವಿಶ್ವಾಸವು (ಈಮಾನ್) ಎಪ್ಪತ್ತಕ್ಕಿಂತಲೂ — ಅಥವಾ ಅರುವತ್ತಕ್ಕಿಂತಲೂ — ಹೆಚ್ಚು ಶಾಖೆಗಳನ್ನು ಹೊಂದಿದೆ. 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನವು ಅತಿಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು ಅತ್ಯಂತ ಕೆಳಗಿನ ಶಾಖೆಯಾಗಿದೆ. ಸಂಕೋಚವು ಸತ್ಯವಿಶ್ವಾಸದ ಒಂದು ಶಾಖೆಯಾಗಿದೆ."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸತ್ಯವಿಶ್ವಾಸದಲ್ಲಿ (ಈಮಾನ್) ಕರ್ಮಗಳು, ವಿಶ್ವಾಸಗಳು ಮತ್ತು ಮಾತುಗಳು ಸೇರಿದಂತೆ ಅನೇಕ ಶಾಖೆಗಳು ಮತ್ತು ಲಕ್ಷಣಗಳಿವೆ. ಸತ್ಯವಿಶ್ವಾಸದ ಅತ್ಯಂತ ಉನ್ನತ ಮತ್ತು ಶ್ರೇಷ್ಠ ಶಾಖೆಯು 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನದ ಅರ್ಥವನ್ನು ಸರಿಯಾಗಿ ಅರಿತು ಅದರಂತೆ ಜೀವನ ನಡೆಸುತ್ತಾ ಅದನ್ನು ಉಚ್ಛರಿಸುವುದು. ಅಲ್ಲಾಹು ಏಕೈಕ ಆರಾಧ್ಯನಾಗಿದ್ದಾನೆ; ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯರಿಲ್ಲ ಮತ್ತು ಅವನು ಮಾತ್ರ ಆರಾಧನೆಗೆ ಅರ್ಹನು ಎಂಬುದು ಅದರ ಅರ್ಥ. ರಸ್ತೆಯಲ್ಲಿ ಜನರಿಗೆ ಅಡ್ಡಿಯುಂಟು ಮಾಡುವ ತೊಡಕುಗಳನ್ನು ನಿವಾರಿಸುವುದು ಸತ್ಯವಿಶ್ವಾಸದ ಕರ್ಮಗಳಲ್ಲಿ ಅತ್ಯಂತ ಚಿಕ್ಕದಾಗಿದೆ. ನಂತರ, ಸಂಕೋಚವು ಸತ್ಯವಿಶ್ವಾಸದ ಒಂದು ಲಕ್ಷಣವಾಗಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಾರೆ. ಸಂಕೋಚ ಎಂಬುದು ಒಂದು ಗುಣವಾಗಿದ್ದು ಅದು ಸುಂದರವಾದ ಕರ್ಮಗಳನ್ನು ಮಾಡಲು ಮತ್ತು ಕೆಟ್ಟ ಕರ್ಮಗಳನ್ನು ತ್ಯಜಿಸಲು ಉತ್ತೇಜಿಸುತ್ತದೆ.
ಅಬೂ ಬಶೀರ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಂದು ಯಾತ್ರೆಯಲ್ಲಿ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದರು. ಆಗ ಜನರು ಮಲಗುವ ಸ್ಥಳದಲ್ಲಿದ್ದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ದೂತನನ್ನು ಕಳುಹಿಸಿ ಹೇಳಿದರು: "ಒಂಟೆಯ ಕೊರಳಲ್ಲಿ ಬಿಲ್ಲಿನ ತಂತಿಯಿಂದ ಮಾಡಿದ ಹಾರ ಅಥವಾ ಬೇರೆ ಯಾವುದೇ ಹಾರವಿದ್ದರೂ ಅದನ್ನು ಕತ್ತರಿಸದೆ ಬಿಟ್ಟು ಬಿಡಬೇಡ."
Al-Bukhari and Muslimಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ರಾತ್ರಿಯಲ್ಲಿ ಜನರು ಮಲಗಲು ತಮ್ಮ ಒಂಟೆಗಳಲ್ಲಿ ಮತ್ತು ಡೇರೆಗಳಲ್ಲಿದ್ದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ದೂತನನ್ನು ಕಳುಹಿಸಿ, ಒಂಟೆಯ ಕೊರಳುಗಳಲ್ಲಿ ಕಟ್ಟಿರುವ ಹಾರಗಳನ್ನು, ಅವು ಬಿಲ್ಲಿನ ತಂತಿಯಿಂದ ಮಾಡಿದ ಹಾರವಾದರೂ ಅಥವಾ ಗಂಟೆ, ಚಪ್ಪಲಿಗಳ ಹಾರವಾದರೂ ಅವುಗಳನ್ನು ಕತ್ತರಿಸಬೇಕೆಂದು ಆದೇಶಿಸಿದರು. ಏಕೆಂದರೆ ಒಂಟೆಯನ್ನು ವಕ್ರ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ಅವರು ಅವುಗಳನ್ನು ಕಟ್ಟುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವುಗಳನ್ನು ಕತ್ತರಿಸಲು ಆದೇಶಿಸಿದರು. ಏಕೆಂದರೆ, ಅವು ಯಾವುದೇ ರಕ್ಷಣೆ ನೀಡುವುದಿಲ್ಲ. ಉಪಕಾರ ಮತ್ತು ತೊಂದರೆ ಮಾಡುವುದು ಅಲ್ಲಾಹು ಮಾತ್ರ. ಅವನಿಗೆ ಯಾವುದೇ ಸಹಭಾಗಿಗಳಿಲ್ಲ.