





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಬ್ಬ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗೆ ಹಿತವಚನ ನೀಡಿರಿ." ಅವರು ಹೇಳಿದರು: "ಕೋಪಗೊಳ್ಳಬೇಡಿ." ಆ ವ್ಯಕ್ತಿ ಹಲವು ಬಾರಿ ಅದೇ ಪ್ರಶ್ನೆ ಕೇಳಿದಾಗಲೂ ಪ್ರವಾದಿಯವರು ಹೇಳಿದರು: "ಕೋಪಗೊಳ್ಳಬೇಡಿ."
Al-Bukhariಸಹಾಬಿಗಳಲ್ಲಿ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಒಬ್ಬರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಉಪಕಾರವಾಗುವ ಏನಾದರೊಂದು ವಿಷಯವನ್ನು ತಿಳಿಸಬೇಕೆಂದು ವಿನಂತಿಸಿದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ "ಕೋಪಗೊಳ್ಳಬೇಡಿ" ಎಂದು ಹೇಳಿದರು. ಇದರ ಅರ್ಥ: ಕೋಪಕ್ಕೆ ಕಾರಣವಾಗುವ ಎಲ್ಲಾ ವಿಷಯಗಳಿಂದಲೂ ದೂರವಿರುವುದು, ಕೋಪ ಬಂದರೆ ಮನಸ್ಸನ್ನು ನಿಯಂತ್ರಿಸುವುದು, ಮತ್ತು ಕೋಪದಿಂದ ಕೊಲ್ಲುವುದು, ಥಳಿಸುವುದು, ನಿಂದಿಸುವುದು ಮುಂತಾದವುಗಳಿಗೆ ಮುಂದಾಗದಿರುವುದು. ಆ ವ್ಯಕ್ತಿ ಪುನಃ ಪುನಃ ಹಿತವಚನ ನೀಡಬೇಕೆಂದು ಹೇಳಿದಾಗಲೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಕೋಪಗೊಳ್ಳಬೇಡಿ." ಎಂದು ಹೇಳುವುದರ ಹೊರತು ಬೇರೇನೂ ಹೇಳಲಿಲ್ಲ.
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನೀವು ಅಲ್ಲಾಹನಲ್ಲಿ ಭರವಸೆಯಿಡಬೇಕಾದ ರೀತಿಯಲ್ಲೇ ಭರವಸೆಯಿಟ್ಟರೆ, ಅವನು ಹಕ್ಕಿಗಳಿಗೆ ಆಹಾರ ನೀಡುವಂತೆ ನಿಮಗೂ ಆಹಾರ ನೀಡುವನು. ಅವು ಬೆಳಗ್ಗೆ ಖಾಲಿ ಹೊಟ್ಟೆಯಿಂದ ಹೊರಟು ಸಂಜೆ ತುಂಬಿದ ಹೊಟ್ಟೆಯೊಂದಿಗೆ ಮರಳುತ್ತವೆ."
Ibn Maajahಪ್ರಾಪಂಚಿಕ ಮತ್ತು ಧಾರ್ಮಿಕವಾದ ಎಲ್ಲಾ ವಿಷಯಗಳಲ್ಲೂ ಲಾಭವನ್ನುಂಟು ಮಾಡಲು ಮತ್ತು ಹಾನಿಯನ್ನು ನಿವಾರಿಸಲು ಅಲ್ಲಾಹನ ಮೇಲೆ ಅವಲಂಬಿತರಾಗಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒತ್ತಾಯಿಸುತ್ತಿದ್ದಾರೆ. ಏಕೆಂದರೆ, ಸರ್ವಶಕ್ತನಾದ ಅಲ್ಲಾಹನಲ್ಲದೆ ಕೊಡುವವರಿಲ್ಲ, ತಡೆಯುವವರಿಲ್ಲ, ತೊಂದರೆ ಕೊಡುವವರಿಲ್ಲ ಮತ್ತು ಉಪಕಾರ ಮಾಡುವವರಿಲ್ಲ. ಅಲ್ಲಾಹನಲ್ಲಿ ಪ್ರಾಮಾಣಿಕವಾಗಿ ಅವಲಂಬಿತರಾಗಿ ನಾವು ಲಾಭಗಳನ್ನು ತರುವ ಮತ್ತು ಹಾನಿಗಳನ್ನು ದೂರೀಕರಿಸುವ ಮಾರ್ಗಗಳನ್ನು ಹುಡುಕಬೇಕಾಗಿದೆ. ನಾವು ಹೀಗೆ ಮಾಡಿದರೆ ಹಕ್ಕಿಗಳಿಗೆ ಆಹಾರ ನೀಡುವಂತೆ ಅಲ್ಲಾಹು ನಮಗೂ ಆಹಾರ ನೀಡುತ್ತಾನೆ. ಅವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹೊರಟು ಸಂಜೆ ತುಂಬಿದ ಹೊಟ್ಟೆಯೊಂದಿಗೆ ಮರಳುತ್ತವೆ. ಹಕ್ಕಿಗಳ ಈ ವರ್ತನೆಯು ಆಹಾರವನ್ನು ಹುಡುಕುವ ಸರಿಯಾದ ಮಾರ್ಗವಾಗಿದೆ. ಅವು ಅಲ್ಲಾಹನ ಮೇಲೆ ಭರವಸೆಯಿಟ್ಟು ಗೂಡಿನಲ್ಲಿ ಕೂರುವುದಾಗಲಿ ಸೋಮಾರಿತನ ಪ್ರದರ್ಶಿಸುವುದಾಗಲಿ ಮಾಡುವುದಿಲ್ಲ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ಒಬ್ಬ ದಾಸ ಪಾಪವನ್ನು ಮಾಡಿ ನಂತರ ಹೇಳುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ. ನಿನಗೆ ಇಷ್ಟವಿರುವುದನ್ನು ಮಾಡು. ನಾನಂತೂ ನಿನ್ನನ್ನು ಕ್ಷಮಿಸಿದ್ದೇನೆ."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುವುದೇನೆಂದರೆ, ಒಬ್ಬ ದಾಸ ಪಾಪ ಮಾಡಿದ ನಂತರ, "ಓ ಅಲ್ಲಾಹ್! ನನ್ನನ್ನು ಕ್ಷಮಿಸು" ಎಂದು ಹೇಳುತ್ತಾನೆ. ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ಅವನನ್ನು ಕ್ಷಮಿಸಿದ್ದೇನೆ." ನಂತರ, ಆ ದಾಸ ಮತ್ತೆ ಪಾಪವನ್ನು ಮಾಡಿ ಪ್ರಾರ್ಥಿಸುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ನನ್ನ ದಾಸನಿಗೆ ಕ್ಷಮಿಸಿದ್ದೇನೆ." ನಂತರ, ಆ ದಾಸ ಮತ್ತೆ ಪಾಪವನ್ನು ಮಾಡಿ ಪ್ರಾರ್ಥಿಸುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ನನ್ನ ದಾಸನಿಗೆ ಕ್ಷಮಿಸಿದ್ದೇನೆ." ಅವನಿಗೆ ಇಷ್ಟವಿರುವುದನ್ನು ಅವನು ಮಾಡಲಿ. ಅವನು ಪ್ರತಿ ಬಾರಿ ಪಾಪ ಮಾಡಿದಾಗಲೂ, ಆ ಪಾಪವನ್ನು ತೊರೆದು, ಪಶ್ಚಾತ್ತಾಪಪಟ್ಟು, ಮತ್ತೆ ಆ ಪಾಪವನ್ನು ಮಾಡುವುದಿಲ್ಲವೆಂದು ನಿರ್ಧರಿಸುತ್ತಾನೆ. ಆದರೆ ಅವನ ಮನಸ್ಸು ಅವನನ್ನು ಸೋಲಿಸುತ್ತದೆ ಅವನು ಮತ್ತೆ ಮತ್ತೆ ಪಾಪ ಮಾಡುತ್ತಾನೆ. ಅವನು ಹೀಗೆ ಪಾಪ ಮಾಡಿದ ನಂತರ ಪಶ್ಚಾತ್ತಾಪಪಡುತ್ತಿರುವ ತನಕ ನಾನು ಅವನಿಗೆ ಕ್ಷಮಿಸುತ್ತಲೇ ಇರುತ್ತೇನೆ. ಪಶ್ಚಾತ್ತಾಪವು ಅದಕ್ಕಿಂತ ಮುಂಚೆ ಮಾಡಿದ ಪಾಪಗಳನ್ನು ನಿರ್ಮೂಲನ ಮಾಡುತ್ತದೆ.
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನ್ಯಾಯಯುತವಾಗಿ ವರ್ತಿಸುವವರು ಅಲ್ಲಾಹನ ಬಳಿ ಪ್ರಕಾಶದ ಪೀಠಗಳ ಮೇಲಿರುತ್ತಾರೆ. ಅವರು ಪರಮ ದಯಾಮಯನ ಬಲಭಾಗದಲ್ಲಿರುತ್ತಾರೆ. ಅಲ್ಲಾಹನ ಎರಡು ಕೈಗಳೂ ಬಲಗೈಗಳಾಗಿವೆ. ಅವರು ಯಾರೆಂದರೆ, ತಮ್ಮ ತೀರ್ಪಿನಲ್ಲಿ, ತಮ್ಮ ಜನರ ವಿಷಯದಲ್ಲಿ ಮತ್ತು ತಮ್ಮ ಅಧೀನದಲ್ಲಿರುವವರ ವಿಷಯದಲ್ಲಿ ನ್ಯಾಯಯುತವಾಗಿ ವರ್ತಿಸುವವರು."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ತಮ್ಮ ಅಧೀನದಲ್ಲಿರುವವರ ವಿಷಯದಲ್ಲಿ ಸತ್ಯ ಮತ್ತು ನ್ಯಾಯದಿಂದ ತೀರ್ಪು ನೀಡುವವರು ಮತ್ತು ಆಡಳಿತ ನಡೆಸುವವರು ಪ್ರಕಾಶದಿಂದ ಸೃಷ್ಟಿಸಲಾದ ಎತ್ತರದ ಪೀಠಗಳಲ್ಲಿ ಕುಳಿತಿರುತ್ತಾರೆ. ಇದು ಅವರಿಗೆ ಪುನರುತ್ಥಾನ ದಿನದಂದು ನೀಡಲಾಗುವ ಗೌರವವಾಗಿದೆ. ಈ ಪೀಠಗಳು ಪರಮ ದಯಾಮಯನಾದ ಅಲ್ಲಾಹನ ಬಲಭಾಗದಲ್ಲಿವೆ. ಸರ್ವಶಕ್ತನಾದ ಅಲ್ಲಾಹನ ಎರಡೂ ಕೈಗಳು ಬಲಗೈಗಳಾಗಿವೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಪರದೂಷಣೆ ಏನೆಂದು ನಿಮಗೆ ತಿಳಿದಿದೆಯೇ?” ಅನುಯಾಯಿಗಳು ಉತ್ತರಿಸಿದರು: “ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು.” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “(ಪರದೂಷಣೆ ಎಂದರೆ) ನಿನ್ನ ಸಹೋದರನ ಬಗ್ಗೆ ಅವನಿಗೆ ಇಷ್ಟವಿಲ್ಲದ ಮಾತನ್ನು ಹೇಳುವುದು.” ಆಗ ಒಬ್ಬರು ಕೇಳಿದರು: “ಒಂದು ವೇಳೆ ನಾನು ಹೇಳುವ ಸಂಗತಿ ಅವನಲ್ಲಿದ್ದರೆ?” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: “ಅದು ಅವನಲ್ಲಿದ್ದರೆ ನೀನು ಅವನ ಬಗ್ಗೆ ಪರದೂಷಣೆ ಮಾಡಿರುವೆ. ಅದು ಅವನಲ್ಲಿಲ್ಲದಿದ್ದರೆ ನೀನು ಅವನ ಮೇಲೆ ಸುಳ್ಳಾರೋಪ ಹೊರಿಸಿರುವೆ.”
Muslimನಿಷೇಧಿಸಲಾದ ಪರದೂಷಣೆ ಯಾವುದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಾರೆ. ಅದು ಅನುಪಸ್ಥಿತನಾಗಿರುವ ಒಬ್ಬ ಮುಸಲ್ಮಾನನ ಬಗ್ಗೆ ಅವನಿಗೆ ಇಷ್ಟವಿಲ್ಲದ್ದನ್ನು ಹೇಳುವುದು. ಅದು ಅವನ ದೇಹದ ಆಕೃತಿ ಅಥವಾ ಗುಣಕ್ಕೆ ಸಂಬಂಧಿಸಿದ್ದಾದರೂ ಸಹ. ಉದಾಹರಣೆಗೆ, ಒಕ್ಕಣ್ಣ, ಮೋಸಗಾರ, ಸುಳ್ಳುಗಾರ ಮುಂತಾದ ಅವನ ಕೆಟ್ಟ ಗುಣಗಳನ್ನು ಹೇಳುವುದು. ಈ ಗುಣಗಳು ಅವನಲ್ಲಿದ್ದರೂ ಸಹ. ಇನ್ನು, ಆ ಗುಣಗಳು ಅವನಲ್ಲಿಲ್ಲದಿದ್ದರೆ ಅದು ಸುಳ್ಳಾರೋಪವಾಗುತ್ತದೆ. ಅಂದರೆ ಒಬ್ಬ ವ್ಯಕ್ತಿಯಲ್ಲಿ ಇಲ್ಲದ್ದನ್ನು ಇದೆಯೆಂದು ಆರೋಪಿಸುವುದು. ಇದು ಪರದೂಷಣೆಗಿಂತಲೂ ಗಂಭೀರವಾಗಿದೆ.
ಖೌಲ ಅನ್ಸಾರಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ನಿಶ್ಚಯವಾಗಿಯೂ ಅಲ್ಲಾಹನ ಆಸ್ತಿಯಲ್ಲಿ ಲಂಗು-ಲಗಾಮಿಲ್ಲದೆ ವ್ಯವಹರಿಸುವ ಜನರು ಯಾರೋ ಅವರಿಗೆ ಪುನರುತ್ಥಾನ ದಿನದಂದು ನರಕಾಗ್ನಿಯಿದೆ.”
Al-Bukhariಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮುಸಲ್ಮಾನರ ಹಣದಲ್ಲಿ ಲಂಗುಲಗಾಮಿಲ್ಲದೆ ವ್ಯವಹರಿಸುವವರು ಮತ್ತು ಅನ್ಯಾಯವಾಗಿ ತಿನ್ನುವವರ ಬಗ್ಗೆ ತಿಳಿಸುತ್ತಾರೆ. ಅನುಚಿತ ಮೂಲಗಳಿಂದ ಸಂಗ್ರಹಿಸುವ ಮತ್ತು ಸಂಪಾದಿಸುವ, ಅನುಚಿತ ವಿಷಯಗಳಿಗಾಗಿ ಖರ್ಚು ಮಾಡುವ ಹಣಗಳೆಲ್ಲವೂ ಇದರ ವ್ಯಾಪ್ತಿಯಲ್ಲಿ ಬರುತ್ತದೆ. ಅನಾಥರ ಆಸ್ತಿಯನ್ನು ತಿನ್ನುವುದು, ವಕ್ಫ್ ಆಸ್ತಿಯನ್ನು ಕಬಳಿಸುವುದು, ವಿಶ್ವಾಸದಿಂದ ಒಪ್ಪಿಸಲಾದ ವಸ್ತುಗಳನ್ನು ಹಿಂದಿರುಗಿಸದಿರುವುದು, ಸಾರ್ವಜನಿಕ ಆಸ್ತಿಯನ್ನು ಅನರ್ಹ ವಿಧಾನಗಳ ಮೂಲಕ ವಶಪಡಿಸುವುದು ಎಲ್ಲವೂ ಇದರಲ್ಲಿ ಒಳಪಡುತ್ತವೆ. ನಂತರ, ಪುನರುತ್ಥಾನ ದಿನದಂದು ಅದಕ್ಕೆ ಪ್ರತಿಫಲವಾಗಿ ಅವರನ್ನು ನರಕಕ್ಕೆ ತಳ್ಳಲಾಗುತ್ತದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುತ್ತಾರೆ.
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಲ್ಲಾ ಒಳ್ಳೆಯ ಕಾರ್ಯಗಳು ದಾನವಾಗಿವೆ."
Al-Bukhariಮಾತು ಅಥವಾ ಕ್ರಿಯೆಗಳ ಮೂಲಕ ಮಾಡುವ ಸಹಾಯ ಮತ್ತು ಉಪಕಾರಗಳೆಲ್ಲವೂ ದಾನವಾಗಿದೆ ಮತ್ತು ಅದಕ್ಕೆ ಪ್ರತಿಫಲವಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಿದ್ದಾರೆ.
ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನೊಂದಿಗೆ ಹೇಳಿದರು: "ಒಳಿತಿನ ಕಾರ್ಯಗಳಲ್ಲಿ ಯಾವುದನ್ನೂ ಕೀಳಾಗಿ ಕಾಣಬೇಡ. ಅದು ನಿನ್ನ ಸಹೋದರನನ್ನು ಮಂದಹಾಸದ ಮುಖದಿಂದ ಭೇಟಿಯಾಗುವುದಾಗಿದ್ದರೂ ಸಹ.”
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒಳಿತಿನ ಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸಿದ್ದಾರೆ ಮತ್ತು ಅದರಲ್ಲಿ ಯಾವುದನ್ನೂ ಕೀಳಾಗಿ ಕಾಣಬಾರದು; ಅದೊಂದು ಚಿಕ್ಕ ಸಂಗತಿಯಾಗಿದ್ದರೂ ಸಹ ಎಂದು ಹೇಳಿದ್ದಾರೆ. ಭೇಟಿಯಾಗುವಾಗ ಮುಖದಲ್ಲಿ ಮುಗುಳ್ನಗೆ ಬೀರುವುದು ಒಂದು ಚಿಕ್ಕ ಒಳಿತಿನ ಕಾರ್ಯವಾಗಿದೆ. ಮುಸಲ್ಮಾನರು ಇದರಲ್ಲಿ ಉತ್ಸಾಹ ತೋರಬೇಕು. ಏಕೆಂದರೆ ಇದರಿಂದ ಮುಸಲ್ಮಾನರ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ ಮತ್ತು ಅವರ ಮನಸ್ಸಿಗೆ ಸಂತೋಷವನ್ನು ನೀಡಿದಂತಾಗುತ್ತದೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಕುಸ್ತಿಯಲ್ಲಿ ಗೆಲ್ಲುವವನು ಬಲಶಾಲಿಯಲ್ಲ. ಕೋಪ ಬರುವಾಗ ಮನಸ್ಸನ್ನು ನಿಗ್ರಹಿಸುವವನೇ (ನಿಜವಾದ) ಬಲಶಾಲಿ.”
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ನಿಜವಾದ ಶಕ್ತಿಯು ದೇಹದ ಶಕ್ತಿಯಲ್ಲ ಅಥವಾ ಬಲಶಾಲಿಗಳು ಕುಸ್ತಿಯಲ್ಲಿ ಇನ್ನೊಬ್ಬರನ್ನು ಬೀಳಿಸುವ ಶಕ್ತಿಯಲ್ಲ. ಬದಲಿಗೆ, ತನ್ನ ದೇಹದ ವಿರುದ್ಧ ಹೋರಾಡುವ ಮತ್ತು ಕೋಪ ಬರುವಾಗ ಅದನ್ನು ನಿಗ್ರಹಿಸುವವನೇ ನಿಜವಾದ ಶಕ್ತಿಶಾಲಿ. ಏಕೆಂದರೆ ಅವನಿಗೆ ಮನಸ್ಸಿನ ಮೇಲಿರುವ ನಿಯಂತ್ರಣವನ್ನು ಮತ್ತು ಶೈತಾನನ ಮೇಲಿರುವ ಹತೋಟಿಯನ್ನು ಇದು ಸೂಚಿಸುತ್ತದೆ.