





























Categories
Discover our diverse collection of categories covering multiple topics to meet your various interestsDa\'wa cards that highlight great meanings of the verses of the Holy Quran and the noble prophetic hadiths in a simple style and attractive display that helps the Muslim to have a deeper understanding of his religion in an easy way
No Ayat found for this category
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಕಷ್ಟದಲ್ಲಿರುವ ವ್ಯಕ್ತಿಗೆ ಕಾಲಾವಕಾಶ ನೀಡುತ್ತಾನೋ, ಅಥವಾ ಅವನ ಸಾಲವನ್ನು ಮನ್ನಾ ಮಾಡುತ್ತಾನೋ, ಅವನಿಗೆ ಪುನರುತ್ಥಾನ ದಿನದಂದು, ಅಂದರೆ ಅಲ್ಲಾಹನ ನೆರಳಿನ ಹೊರತು ಬೇರೆ ನೆರಳಿಲ್ಲದ ದಿನದಂದು, ಅಲ್ಲಾಹು ತನ್ನ ಸಿಂಹಾಸನದ ನೆರಳಿನಲ್ಲಿ ನೆರಳು ನೀಡುತ್ತಾನೆ."
At-Tirmidhiಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಸಾಲಗಾರನಿಗೆ ಸಾಲ ಮರುಪಾವತಿ ಮಾಡಲು ಕಾಲಾವಕಾಶ ನೀಡುತ್ತಾನೋ, ಅಥವಾ ಅವನ ಸಾಲವನ್ನು ಮನ್ನಾ ಮಾಡುತ್ತಾನೋ, ಅವನಿಗೆ ಸಿಗುವ ಪ್ರತಿಫಲವು: ಪುನರುತ್ಥಾನ ದಿನದಂದು ಅಲ್ಲಾಹು ಅವನಿಗೆ ತನ್ನ ಸಿಂಹಾಸನದ ನೆರಳಿನಲ್ಲಿ ನೆರಳು ನೀಡುತ್ತಾನೆ. ಅಂದು ಸೂರ್ಯನು ಜನರ ತಲೆಯ ಹತ್ತಿರದಲ್ಲಿದ್ದು ಅದರ ಶಾಖವು ಬಹಳ ಕಠೋರವಾಗಿರುತ್ತದೆ. ಅಂದು ಅಲ್ಲಾಹು ನೀಡಿದ ನೆರಳಿನ ಹೊರತು ಬೇರೆ ಯಾವುದೇ ನೆರಳೂ ಇರುವುದಿಲ್ಲ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಾರಿಗಾದರೂ ಒಳಿತನ್ನು ಬಯಸಿದರೆ, ಅವನಿಗೆ ಕಷ್ಟಗಳು ಬಾಧಿಸುವಂತೆ ಮಾಡುತ್ತಾನೆ."
Al-Bukhariಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ತನ್ನ ಸತ್ಯವಿಶ್ವಾಸಿ ದಾಸರಲ್ಲಿ ಯಾರಿಗಾದರೂ ಒಳಿತನ್ನು ಬಯಸಿದರೆ, ಅವರನ್ನು ಅವರ ದೇಹದಲ್ಲಿ, ಆಸ್ತಿಯಲ್ಲಿ ಅಥವಾ ಕುಟುಂಬದಲ್ಲಿ ಪರೀಕ್ಷಿಸುತ್ತಾನೆ. ಈ ಪರೀಕ್ಷೆಗಳು ಸತ್ಯವಿಶ್ವಾಸಿಯು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾ ಅವನ ಕಡೆಗೆ ಮರಳಲು, ಅವನ ಪಾಪಗಳು ಪರಿಹಾರವಾಗಲು ಮತ್ತು ಅವನ ಪದವಿಗಳು ಉನ್ನತವಾಗಲು ಕಾರಣವಾಗುತ್ತವೆ.
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ನಿಶ್ಚಯವಾಗಿಯೂ ಅಲ್ಲಾಹು ಒಳಿತು ಮತ್ತು ಕೆಡುಕುಗಳನ್ನು ದಾಖಲಿಸಿದನು. ನಂತರ ಅವುಗಳನ್ನು (ಹೀಗೆ) ವಿವರಿಸಿದನು: ಒಬ್ಬ ವ್ಯಕ್ತಿ ಒಂದು ಒಳಿತನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡದಿದ್ದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಪೂರ್ಣ ಒಳಿತನ್ನು ದಾಖಲಿಸುವನು. ಅವನು ಒಂದು ಒಳಿತನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ, ಅಲ್ಲಾಹು ಅದರ ಪ್ರತಿಫಲವನ್ನು ಹತ್ತರಿಂದ ಏಳು ನೂರರವರೆಗೆ ಇಮ್ಮಡಿಗೊಳಿಸಿ, ಅಥವಾ ಅದಕ್ಕಿಂತಲೂ ಹೆಚ್ಚು ಪ್ರತಿಫಲವನ್ನು ದಾಖಲಿಸುವನು. ಒಬ್ಬ ವ್ಯಕ್ತಿ ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡದಿದ್ದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಪೂರ್ಣ ಒಳಿತನ್ನು ದಾಖಲಿಸುವನು. ಅವನು ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಕೆಡುಕನ್ನು ಮಾತ್ರ ದಾಖಲಿಸುವನು."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಅಲ್ಲಾಹು ಒಳಿತು ಮತ್ತು ಕೆಡುಕುಗಳನ್ನು ನಿರ್ಣಯಿಸಿದ ನಂತರ ಅವುಗಳನ್ನು ದಾಖಲಿಸುವ ವಿಧಾನವನ್ನು ದೇವದೂತರಿಗೆ ಹೀಗೆ ವಿವರಿಸಿಕೊಟ್ಟನು: ಒಬ್ಬ ವ್ಯಕ್ತಿ ಒಂದು ಒಳಿತನ್ನು ಮಾಡಲು ಉದ್ದೇಶಿಸಿ, ಮನಸ್ಸಿನಲ್ಲಿ ದೃಢವಾಗಿ ನಿರ್ಧರಿಸಿದರೆ ಅವನ ಹೆಸರಲ್ಲಿ ಒಂದು ಒಳಿತು ಮಾಡಿದ ಪುಣ್ಯವು ದಾಖಲಾಗುತ್ತದೆ. ಅವನು ಆ ಒಳಿತನ್ನು ಮಾಡದಿದ್ದರೂ ಸಹ. ಇನ್ನು ಅವನು ಅದನ್ನು ಮಾಡಿದರೆ ಅವನ ಹೆಸರಲ್ಲಿ ಹತ್ತರಿಂದ ತೊಡಗಿ ಏಳುನೂರರ ತನಕ ಒಳಿತುಗಳನ್ನು ಮಾಡಿದ ಪುಣ್ಯಗಳು ದಾಖಲಾಗುತ್ತವೆ. ಈ ಹೆಚ್ಚುವರಿಯು ಅವನ ಹೃದಯದಲ್ಲಿರುವ ನಿಷ್ಕಳಂಕತೆ ಮತ್ತು ಆ ಒಳಿತಿನಿಂದ ಇತರ ಜನರಿಗಿರುವ ಪ್ರಯೋಜನಗಳನ್ನು ಅವಲಂಬಿಸಿಕೊಂಡಿದೆ. ಒಬ್ಬ ವ್ಯಕ್ತಿ ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ, ಮನಸ್ಸಿನಲ್ಲಿ ದೃಢವಾಗಿ ನಿರ್ಧರಿಸಿ, ನಂತರ ಅಲ್ಲಾಹನ ಭಯದಿಂದ ಅದನ್ನು ಮಾಡದಿದ್ದರೆ, ಅವನ ಹೆಸರಲ್ಲಿ ಒಂದು ಒಳಿತು ಮಾಡಿದ ಪುಣ್ಯವು ದಾಖಲಾಗುತ್ತದೆ. ಸಂದರ್ಭಗಳು ಕೈತಪ್ಪಿದ್ದರಿಂದ, ಅಥವಾ ಇತರ ಕಾರ್ಯಗಳಲ್ಲಿ ಮಗ್ನನಾಗಿದ್ದರಿಂದ ಅವನು ಆ ಕೆಡುಕನ್ನು ಮಾಡದಿದ್ದರೆ ಅವನಿಗೆ ಈ ಪುಣ್ಯ ಸಿಗುವುದಿಲ್ಲ. ಆದರೆ, ಅದನ್ನು ಮಾಡಲು ಸಾಧ್ಯವಾಗದೆ ಅವನು ಅದನ್ನು ತೊರೆದರೆ, ಅವನ ಉದ್ದೇಶಕ್ಕೆ ಅನುಗುಣವಾಗಿ ಅವನಿಗೆ ಪ್ರತಿಫಲ ನೀಡಲಾಗುತ್ತದೆ. ಇನ್ನು ಅವನು ಆ ಕೆಡುಕನ್ನು ಮಾಡಿಯೇ ಬಿಟ್ಟರೆ ಅವನ ಹೆಸರಲ್ಲಿ ಕೇವಲ ಒಂದು ಕೆಡುಕು ಮಾತ್ರ ದಾಖಲಾಗುತ್ತದೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನಿಮ್ಮ ರೂಪಗಳನ್ನು ಅಥವಾ ನಿಮ್ಮ ಆಸ್ತಿಯನ್ನು ನೋಡುವುದಿಲ್ಲ. ಬದಲಿಗೆ, ಅವನು ನಿಮ್ಮ ಹೃದಯಗಳನ್ನು ಮತ್ತು ಕರ್ಮಗಳನ್ನು ನೋಡುತ್ತಾನೆ."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ತನ್ನ ದಾಸರ ರೂಪವನ್ನು ಅಥವಾ ದೇಹವನ್ನು, ಅದು ಸುಂದರವಾಗಿದೆಯೇ? ಅಸಹ್ಯವಾಗಿದೆಯೇ? ದೊಡ್ಡದೇ? ಸಣ್ಣದೇ? ಆರೋಗ್ಯದಲ್ಲಿದೆಯೇ? ಅನಾರೋಗ್ಯದಲ್ಲಿದೆಯೇ? ಎಂದು ನೋಡುವುದಿಲ್ಲ. ಅವರ ಆಸ್ತಿಯನ್ನು, ಅದು ಹೆಚ್ಚಿದೆಯೇ? ಅಥವಾ ಕಡಿಮೆಯಿದೆಯೇ? ಎಂದು ನೋಡುವುದಿಲ್ಲ. ಸರ್ವಶಕ್ತನಾದ ಅಲ್ಲಾಹು ಅವನ ದಾಸರನ್ನು ಇವುಗಳ ಆಧಾರದಲ್ಲಿ, ಅಂದರೆ ಅವು ಹೆಚ್ಚು ಇದೆಯೋ ಅಥವಾ ಕಡಿಮೆ ಇದೆಯೋ ಎಂಬ ಆಧಾರದಲ್ಲಿ ಶಿಕ್ಷಿಸುವುದಿಲ್ಲ ಮತ್ತು ವಿಚಾರಣೆ ಮಾಡುವುದಿಲ್ಲ. ಬದಲಿಗೆ ಅವನು ಅವರ ಹೃದಯಗಳನ್ನು, ಅದರಲ್ಲಿ ದೇವಭಯ, ದೃಢವಿಶ್ವಾಸ, ಪ್ರಾಮಾಣಿಕತೆ ಮತ್ತು ನಿಷ್ಕಳಂಕತೆಗಳಿವೆಯೋ, ಅಥವಾ ಅವುಗಳಲ್ಲಿರುವುದು ತೋರಿಕೆ ಮತ್ತು ಕೀರ್ತಿಯ ಆಸೆಯೋ ಎಂದು ನೋಡುತ್ತಾನೆ. ಅದೇ ರೀತಿ, ಅವರ ಕರ್ಮಗಳನ್ನು, ಅದು ಒಳ್ಳೆಯ ಕರ್ಮಗಳೋ ಅಥವಾ ಕೆಟ್ಟ ಕರ್ಮಗಳೋ ಎಂದು ನೋಡಿ ಅವುಗಳ ಆಧಾರದಲ್ಲೇ ಅವರಿಗೆ ಪ್ರತಿಫಲ ಮತ್ತು ಶಿಕ್ಷೆಯನ್ನು ನೀಡುತ್ತಾನೆ.
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಂದು ದಿನ ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಕುಳಿತಿದ್ದೆವು. ಆಗ ಶುಭ್ರ ಬಿಳಿ ಬಣ್ಣದ ಬಟ್ಟೆ ಧರಿಸಿದ ಮತ್ತು ಕಡುಗಪ್ಪು ಕೂದಲನ್ನು ಹೊಂದಿದ್ದ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ಅವರಲ್ಲಿ ಪ್ರಯಾಣದ ಯಾವುದೇ ಕುರುಹು ಗೋಚರಿಸುತ್ತಿರಲಿಲ್ಲ. ನಮ್ಮಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಎಲ್ಲಿಯವರೆಗೆಂದರೆ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಬಂದು (ಎರಡು ಕಾಲುಗಳನ್ನು ಮಡಚಿಟ್ಟು), ತಮ್ಮ ಮೊಣಕಾಲನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಣಕಾಲಿಗೆ ತಾಗಿಸಿ ಕುಳಿತರು. ನಂತರ ತಮ್ಮ ಕೈಯನ್ನು ತೊಡೆಯ ಮೇಲಿಟ್ಟು ಹೇಳಿದರು: "ಓ ಮುಹಮ್ಮದ್! ನನಗೆ ಇಸ್ಲಾಮಿನ ಬಗ್ಗೆ ತಿಳಿಸಿಕೊಡಿ." ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಸ್ಲಾಮ್ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಕಅಬಾಲಯಕ್ಕೆ ತಲುಪುವ ಸಾಮರ್ಥ್ಯವಿದ್ದರೆ ಕಅಬಾಲಯಕ್ಕೆ ಹಜ್ಜ್ ನಿರ್ವಹಿಸುವುದು." ಆ ವ್ಯಕ್ತಿ ಹೇಳಿದರು: "ನೀವು ಹೇಳಿದ್ದು ಸತ್ಯ." ಆ ವ್ಯಕ್ತಿ ಪ್ರಶ್ನೆ ಕೇಳಿ ನಂತರ ಅದನ್ನು ಸತ್ಯವೆಂದು ದೃಢೀಕರಿಸುವುದನ್ನು ನೋಡಿ ನಮಗೆ ಅಚ್ಚರಿಯಾಯಿತು! ಅವರು ಹೇಳಿದರು: "ನನಗೆ ಈಮಾನ್ನ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಈಮಾನ್ ಎಂದರೆ ಅಲ್ಲಾಹನಲ್ಲಿ, ಅವನ ದೇವದೂತರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯದಿನದಲ್ಲಿ ಮತ್ತು ವಿಧಿಯಲ್ಲಿ — ಅದರ ಒಳಿತು ಮತ್ತು ಕೆಡುಕುಗಳಲ್ಲಿ — ವಿಶ್ವಾಸವಿಡುವುದು." ಆ ವ್ಯಕ್ತಿ ಹೇಳಿದರು: "ನೀವು ಹೇಳಿದ್ದು ಸತ್ಯ." ಆ ವ್ಯಕ್ತಿ ಹೇಳಿದರು: "ನನಗೆ ಇಹ್ಸಾನ್ನ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಇಹ್ಸಾನ್ ಎಂದರೆ ನೀವು ಅಲ್ಲಾಹನನ್ನು ನೋಡುತ್ತಿರುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡುವುದಿಲ್ಲವಾದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆ." ಆ ವ್ಯಕ್ತಿ ಹೇಳಿದರು: "ನನಗೆ ಪ್ರಳಯದ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಪ್ರಳಯದ ಬಗ್ಗೆ ಪ್ರಶ್ನೆ ಕೇಳಲಾದವರಿಗೆ ಪ್ರಶ್ನೆ ಕೇಳಿದವರಿಗಿಂತಲೂ ಹೆಚ್ಚು ಜ್ಞಾನವಿಲ್ಲ." ಆ ವ್ಯಕ್ತಿ ಹೇಳಿದರು: "ಹಾಗಾದರೆ, ನನಗೆ ಅದರ ಚಿಹ್ನೆಗಳ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಾಸಿ ತನ್ನ ಒಡತಿಗೆ ಜನ್ಮ ನೀಡುವುದು ಮತ್ತು ನಗ್ನ ಪಾದಗಳ ಹಾಗೂ ನಗ್ನ ದೇಹಗಳ ಬಡ ಕುರಿಗಾಹಿಗಳು ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಲ್ಲಿ ಪರಸ್ಪರ ಅಹಂಭಾವಪಡುವುದು ಅದರ ಚಿಹ್ನೆಗಳಾಗಿವೆ." ನಂತರ ಆ ವ್ಯಕ್ತಿ ಹೊರಟುಹೋದರು. ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಸ್ವಲ್ಪ ಹೊತ್ತು ಕುಳಿತುಕೊಂಡೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಉಮರ್! ಪ್ರಶ್ನೆ ಕೇಳಿದ ವ್ಯಕ್ತಿ ಯಾರೆಂದು ತಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ಬಲ್ಲವರು." ಅವರು ಹೇಳಿದರು: "ಅವರು ಜಿಬ್ರೀಲ್. ನಿಮಗೆ ನಿಮ್ಮ ಧರ್ಮವನ್ನು ಕಲಿಸಲು ಅವರು ನಿಮ್ಮ ಬಳಿಗೆ ಬಂದಿದ್ದರು."
Muslimಇಲ್ಲಿ ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಒಮ್ಮೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅಪರಿಚಿತ ವ್ಯಕ್ತಿಯ ರೂಪದಲ್ಲಿ ಸಹಾಬಿಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಬಳಿಗೆ ಬಂದರು. ಅವರ ಉಡುಪು ಶುಭ್ರ ಬಿಳಿ ಬಣ್ಣದ್ದಾಗಿತ್ತು ಮತ್ತು ಅವರ ತಲೆಗೂದಲು ಕಡುಗಪ್ಪು ಬಣ್ಣವನ್ನು ಹೊಂದಿತ್ತು. ಅವರಲ್ಲಿ ಪ್ರಯಾಣದ ಕುರುಹುಗಳಾದ ಸುಸ್ತು, ಧೂಳು, ತಲೆಗೂದಲು ಕೆದರಿರುವುದು, ಬಟ್ಟೆಗಳು ಕೊಳೆಯಾಗಿರುವುದು ಮುಂತಾದ ಯಾವುದೂ ಕಾಣಿಸುತ್ತಿರಲಿಲ್ಲ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಕುಳಿತಿದ್ದವರಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಆ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದೆ ವಿದ್ಯಾರ್ಥಿ ಕುಳಿತುಕೊಳ್ಳುವಂತೆ ಕುಳಿತುಕೊಂಡರು. ನಂತರ ಅವರು ಇಸ್ಲಾಮಿನ ಬಗ್ಗೆ ಕೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಉತ್ತರ ನೀಡುತ್ತಾ ಇಸ್ಲಾಮಿನ ಐದು ಸ್ತಂಭಗಳ ಬಗ್ಗೆ ತಿಳಿಸಿದರು. ಎರಡು ಸಾಕ್ಷಿವಚನಗಳನ್ನು ಅಂಗೀಕರಿಸುವುದು, ಐದು ವೇಳೆಯ ಕಡ್ಡಾಯ ನಮಾಝ್ಗಳನ್ನು ಸರಿಯಾಗಿ ನಿರ್ವಹಿಸುವುದು, ಅರ್ಹರಿಗೆ ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಸಾಮರ್ಥ್ಯವಿರುವವರು ಹಜ್ಜ್ ಕರ್ಮವನ್ನು ಕಡ್ಡಾಯವಾಗಿ ನಿರ್ವಹಿಸುವುದು. ಆಗ ಪ್ರಶ್ನೆ ಕೇಳಿದ ವ್ಯಕ್ತಿ ನೀವು ಹೇಳಿದ್ದು ಸತ್ಯ ಎಂದರು. ಆ ವ್ಯಕ್ತಿ ಜ್ಞಾನವಿಲ್ಲದವರಂತೆ ಪ್ರಶ್ನೆ ಕೇಳಿ ನಂತರ ಉತ್ತರವನ್ನು ದೃಢೀಕರಿಸುವುದನ್ನು ಕಂಡು ಸಹಾಬಿಗಳಿಗೆ ಆಶ್ಚರ್ಯವಾಯಿತು. ನಂತರ ಆ ವ್ಯಕ್ತಿ ಈಮಾನ್ನ ಬಗ್ಗೆ ಕೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಉತ್ತರ ನೀಡುತ್ತಾ ಈಮಾನ್ನ (ವಿಶ್ವಾಸದ) ಆರು ಸ್ತಂಭಗಳ ಬಗ್ಗೆ ತಿಳಿಸಿದರು: ಅಲ್ಲಾಹನ ಅಸ್ತಿತ್ವದಲ್ಲಿ, ಅವರ ಗುಣಲಕ್ಷಣಗಳಲ್ಲಿ, ಸೃಷ್ಟಿ ಮುಂತಾದ ಅವನ ಕ್ರಿಯೆಗಳಲ್ಲಿ ಮತ್ತು ಆರಾಧನೆಗೆ ಅವನು ಮಾತ್ರ ಅರ್ಹನೆಂಬುದರಲ್ಲಿ ವಿಶ್ವಾಸವಿಡುವುದು. ಅಲ್ಲಾಹು ದೇವದೂತರನ್ನು ಪ್ರಕಾಶದಿಂದ ಸೃಷ್ಟಿಸಿದ್ದಾನೆ, ಅವರು ಅವನ ಗೌರವಾರ್ಹ ದಾಸರಾಗಿದ್ದಾರೆ, ಅವರು ಅಲ್ಲಾಹನ ಆಜ್ಞೆಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಅವನ ಆಜ್ಞೆಯಂತೆಯೇ ನಡೆಯುತ್ತಾರೆ ಎಂದು ವಿಶ್ವಾಸವಿಡುವುದು. ಕುರ್ಆನ್, ತೌರಾತ್, ಇಂಜೀಲ್ ಮುಂತಾದ ಅಲ್ಲಾಹು ಅವನ ಸಂದೇಶವಾಹಕರುಗಳಿಗೆ ಅವತೀರ್ಣಗೊಳಿಸಿದ ಗ್ರಂಥಗಳಲ್ಲಿ ವಿಶ್ವಾಸವಿಡುವುದು. ಅಲ್ಲಾಹನ ಧರ್ಮವನ್ನು ಮನುಷ್ಯರಿಗೆ ತಲುಪಿಸಿಕೊಟ್ಟ ನೂಹ್, ಇಬ್ರಾಹೀಮ್, ಮೂಸಾ, ಈಸಾ ಮತ್ತು ಅಂತಿಮ ಪ್ರವಾದಿ ಮುಹಮ್ಮದ್ (ಅವರೆಲ್ಲರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಾಗೂ ಇತರ ಎಲ್ಲಾ ಪ್ರವಾದಿಗಳಲ್ಲಿ ಮತ್ತು ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡುವುದು. ಅಂತ್ಯದಿನದಲ್ಲಿ ವಿಶ್ವಾಸವಿಡುವುದು. ಮರಣದ ನಂತರ ಸಂಭವಿಸುವ ಸಮಾಧಿ ಜೀವನ, ಬರ್ಝಕ್ ಜೀವನ, ಮನುಷ್ಯನನ್ನು ಪುನಃ ಜೀವಂತ ಎಬ್ಬಿಸಿ ವಿಚಾರಣೆ ಮಾಡುವುದು, ಅಂತಿಮವಾಗಿ ಅವನು ಸ್ವರ್ಗ ಅಥವಾ ನರಕಕ್ಕೆ ಸೇರುವುದು ಮುಂತಾದವುಗಳು ಈ ವಿಶ್ವಾಸದಲ್ಲಿ ಒಳಪಡುತ್ತವೆ. ಅಲ್ಲಾಹು ತನ್ನ ಶಾಶ್ವತ ಜ್ಞಾನದಿಂದ ಮತ್ತು ತನ್ನ ಯುಕ್ತಿಗೆ ಅನುಗುಣವಾಗಿ ಎಲ್ಲಾ ವಿಷಯಗಳನ್ನು ನಿರ್ಣಯಿಸಿದ್ದಾನೆ, ಅವುಗಳನ್ನು ದಾಖಲುಗೊಳಿಸಿದ್ದಾನೆ, ಅವುಗಳನ್ನು ಇಚ್ಛಿಸಿದ್ದಾನೆ, ಅವನ ನಿರ್ಣಯದಂತೆಯೇ ಅವು ಸಂಭವಿಸುತ್ತವೆ ಮತ್ತು ಅವನೇ ಅವುಗಳನ್ನು ಸೃಷ್ಟಿಸಿದ್ದಾನೆ ಎಂದು ವಿಶ್ವಾಸವಿಡುವುದು. ನಂತರ ಆ ವ್ಯಕ್ತಿ ಇಹ್ಸಾನ್ನ ಬಗ್ಗೆ ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಹ್ಸಾನ್ ಎಂದರೆ, ನೀನು ಅಲ್ಲಾಹನನ್ನು ನೋಡುತ್ತಿರುವಂತೆ ಅವನನ್ನು ಆರಾಧಿಸುವುದು; ಆ ಸ್ಥಾನಕ್ಕೆ ತಲುಪಲು ನಿನಗೆ ಸಾಧ್ಯವಾಗದಿದ್ದರೆ ಕನಿಷ್ಠ ಅವನು ನಿನ್ನನ್ನು ನೋಡುತ್ತಿದ್ದಾನೆ ಎಂಬ ಪ್ರಜ್ಞೆಯೊಂದಿಗೆ ಅವನನ್ನು ಆರಾಧಿಸುವುದು ಎಂದು ತಿಳಿಸುತ್ತಾರೆ. ಮೊದಲನೆಯದು ನೋಡುವ ಸ್ಥಾನ. ಇದು ಉನ್ನತ ಸ್ಥಾನವಾಗಿದೆ. ಎರಡನೆಯದು ನೋಡುತ್ತಿದ್ದಾನೆಂಬ ಪ್ರಜ್ಞೆಯ ಸ್ಥಾನ. ನಂತರ ಆ ವ್ಯಕ್ತಿ ಪ್ರಳಯ ಯಾವಾಗ ಸಂಭವಿಸುತ್ತದೆ ಎಂದು ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಳಯದ ಕುರಿತಾದ ಜ್ಞಾನವು ಅಲ್ಲಾಹನಿಗೆ ಮಾತ್ರವಿರುವ ಜ್ಞಾನವಾಗಿದ್ದು ಸೃಷ್ಟಿಗಳಲ್ಲಿ ಯಾರಿಗೂ ಅದು ತಿಳಿದಿಲ್ಲ, ಪ್ರಶ್ನೆ ಕೇಳಿದವನಿಗಾಗಲಿ, ಉತ್ತರ ನೀಡುವವನಿಗಾಗಲಿ ಅದು ತಿಳಿದಿಲ್ಲ ಎಂದು ವಿವರಿಸಿದರು. ನಂತರ ಆ ವ್ಯಕ್ತಿ ಪ್ರಳಯದ ಚಿಹ್ನೆಗಳ ಬಗ್ಗೆ ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಗುಲಾಮರು ಮತ್ತು ಅವರ ಸಂತಾನಗಳು ಹೆಚ್ಚಾಗುವುದು, ಮಕ್ಕಳು ತಾಯಂದಿರಿಗೆ ಅವಿಧೇಯತೆ ತೋರುವುದು ಮತ್ತು ಅವರನ್ನು ಗುಲಾಮರಂತೆ ನಡೆಸಿಕೊಳ್ಳುವುದು, ಕೊನೆಯ ಕಾಲದಲ್ಲಿ ಕುರಿಗಾಹಿಗಳಿಗೆ ಮತ್ತು ಬಡವರಿಗೆ ಅಪಾರ ಐಶ್ವರ್ಯವುಂಟಾಗಿ ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ಮತ್ತು ಅಲಂಕರಿಸುವುದರಲ್ಲಿ ಅವರು ಅಹಂಭಾವ ಪ್ರಕಟಿಸುವುದು ಪ್ರಳಯದ ಚಿಹ್ನೆಗಳಾಗಿವೆ ಎಂದು ತಿಳಿಸಿದರು. ಪ್ರಶ್ನೆ ಕೇಳಿದ ವ್ಯಕ್ತಿ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಆಗಿದ್ದರು ಮತ್ತು ಅವರು ಸಹಾಬಿಗಳಿಗೆ ಈ ಋಜುವಾದ ಧರ್ಮವನ್ನು ಕಲಿಸಲು ಬಂದಿದ್ದರು ಎಂದು ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು.
ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ಓ ನನ್ನ ದಾಸರೇ! ನಾನು ಸ್ವಯಂ ನನ್ನ ಮೇಲೆ ಅನ್ಯಾಯವನ್ನು ನಿಷೇಧಿಸಿದ್ದೇನೆ. ಅದೇ ರೀತಿ ಅದನ್ನು ನಿಮಗೂ ನಿಷೇಧಿಸಿದ್ದೇನೆ. ಆದ್ದರಿಂದ ನೀವು ಪರಸ್ಪರ ಅನ್ಯಾಯ ಮಾಡಬೇಡಿ. ಓ ನನ್ನ ದಾಸರೇ! ನಾನು ಸನ್ಮಾರ್ಗ ತೋರಿಸಿದವರ ಹೊರತು ನೀವೆಲ್ಲರೂ ದಾರಿ ತಪ್ಪಿದವರು. ಆದ್ದರಿಂದ ನನ್ನಲ್ಲಿ ಸನ್ಮಾರ್ಗವನ್ನು ಬೇಡಿರಿ. ನಾನು ನಿಮಗೆ ಸನ್ಮಾರ್ಗ ತೋರಿಸುತ್ತೇನೆ. ಓ ನನ್ನ ದಾಸರೇ! ನಾನು ಆಹಾರ ನೀಡಿದವರ ಹೊರತು ನೀವೆಲ್ಲರೂ ಹಸಿದವರು. ಆದ್ದರಿಂದ ನನ್ನಲ್ಲಿ ಆಹಾರವನ್ನು ಬೇಡಿರಿ. ನಾನು ನಿಮಗೆ ಆಹಾರ ನೀಡುತ್ತೇನೆ. ಓ ನನ್ನ ದಾಸರೇ! ನಾನು ಬಟ್ಟೆ ಉಡಿಸಿದವರ ಹೊರತು ನೀವೆಲ್ಲರೂ ನಗ್ನರು. ಆದ್ದರಿಂದ ನನ್ನಲ್ಲಿ ಬಟ್ಟೆಯನ್ನು ಬೇಡಿರಿ. ನಾನು ನಿಮಗೆ ಬಟ್ಟೆ ಉಡಿಸುತ್ತೇನೆ. ಓ ನನ್ನ ದಾಸರೇ! ನೀವು ಹಗಲೂ-ರಾತ್ರಿ ಪಾಪ ಮಾಡುತ್ತೀರಿ. ನಾನು ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತೇನೆ. ಆದ್ದರಿಂದ ನನ್ನಲ್ಲಿ ಕ್ಷಮೆಯಾಚಿಸಿರಿ. ನಾನು ನಿಮ್ಮನ್ನು ಕ್ಷಮಿಸುತ್ತೇನೆ. ಓ ನನ್ನ ದಾಸರೇ! ನನಗೆ ಯಾವುದೇ ತೊಂದರೆ ಮಾಡಲು ನಿಮಗೆ ಎಂದಿಗೂ ಸಾಧ್ಯವಿಲ್ಲ. ಅದೇ ರೀತಿ ನನಗೆ ಯಾವುದೇ ಉಪಕಾರ ಮಾಡಲೂ ನಿಮಗೆ ಎಂದಿಗೂ ಸಾಧ್ಯವಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್ಗಳು—ಎಲ್ಲರೂ ನಿಮ್ಮ ಪೈಕಿ ಮಹಾ ದೇವಭಯವುಳ್ಳವನಿಗೆ ಇರುವಂತಹ ಹೃದಯದಂತೆಯಾದರೂ, ಅದರಿಂದ ನನ್ನ ಆಧಿಪತ್ಯದಲ್ಲಿ ಏನೂ ಹೆಚ್ಚಾಗುವುದಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್ಗಳು—ಎಲ್ಲರೂ ನಿಮ್ಮ ಪೈಕಿ ಮಹಾ ದುಷ್ಟನಿಗೆ ಇರುವಂತಹ ಹೃದಯದಂತೆಯಾದರೂ, ಅದರಿಂದ ನನ್ನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್ಗಳು—ಎಲ್ಲರೂ ಒಂದೇ ಬಯಲು ಪ್ರದೇಶದಲ್ಲಿ ನಿಂತು, (ಎಲ್ಲರೂ) ನನ್ನಲ್ಲಿ ಬೇಡಿಕೆಯಿಟ್ಟು, ನಾನು ಪ್ರತಿಯೊಬ್ಬ ಮನುಷ್ಯನ ಬೇಡಿಕೆಯನ್ನು ಈಡೇರಿಸಿದರೂ, ಒಂದು ಸೂಜಿಯನ್ನು ಸಮುದ್ರಕ್ಕೆ ಚುಚ್ಚಿದರೆ (ಸಮುದ್ರದಲ್ಲಿ) ಏನು ಕಡಿಮೆಯಾಗಬಹುದೋ ಅಷ್ಟಲ್ಲದೆ ನನ್ನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಓ ನನ್ನ ದಾಸರೇ! ನಾನು ನಿಮಗೆ ನಿಮ್ಮ ಕರ್ಮಗಳನ್ನು ಮಾತ್ರ ಎಣಿಸಿಡುತ್ತೇನೆ. ನಂತರ ಅವುಗಳಿಗೆ ಪ್ರತಿಫಲ ನೀಡುತ್ತೇನೆ. ಆದ್ದರಿಂದ ಯಾರಾದರೂ ಒಳಿತನ್ನು ಪಡೆದರೆ ಅವನು ಅಲ್ಲಾಹನನ್ನು ಸ್ತುತಿಸಲಿ. ಯಾರಾದರೂ ಅದಲ್ಲದೆ ಬೇರೇನಾದರೂ ಪಡೆದರೆ, ಅವನು ಸ್ವತಃ ಅವನನ್ನಲ್ಲದೆ ಇನ್ನಾರನ್ನೂ ದೂಷಿಸದಿರಲಿ.”
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅವನು ಸ್ವಯಂ ಅವನ ಮೇಲೆ ಅನ್ಯಾಯವನ್ನು ನಿಷೇಧಿಸಿದ್ದಾನೆ ಮತ್ತು ಅದನ್ನು ಅವನ ಸೃಷ್ಟಿಗಳಿಗೂ ನಿಷೇಧಿಸಿದ್ದಾನೆ. ಆದ್ದರಿಂದ ಅವರು (ಸೃಷ್ಟಿಗಳು) ಪರಸ್ಪರ ಅನ್ಯಾಯ ಮಾಡಬಾರದು. ಅಲ್ಲಾಹನ ಮಾರ್ಗದರ್ಶನ ಮತ್ತು ಅನುಗ್ರಹವನ್ನು ಪಡೆಯದ ಸೃಷ್ಟಿಗಳೆಲ್ಲರೂ ಸತ್ಯ ಮಾರ್ಗದಿಂದ ತಪ್ಪಿ ಹೋಗಿದ್ದಾರೆ. ಯಾರು ಅಲ್ಲಾಹನಲ್ಲಿ ಸನ್ಮಾರ್ಗವನ್ನು ಬೇಡುತ್ತಾರೋ ಅವರಿಗೆ ಅವನು ಸನ್ಮಾರ್ಗವನ್ನು ನೀಡಿ ಅನುಗ್ರಹಿಸುತ್ತಾನೆ. ಸೃಷ್ಟಿಗಳೆಲ್ಲರೂ ಅಲ್ಲಾಹನ ಮೇಲೆ ಅವಲಂಬಿತರಾಗಿದ್ದಾರೆ. ಅವರು ತಮ್ಮ ಎಲ್ಲಾ ಅಗತ್ಯಗಳಿಗೂ ಅವನನ್ನೇ ಆಶ್ರಯಿಸಬೇಕಾಗಿದೆ. ಯಾರು ಅಲ್ಲಾಹನಲ್ಲಿ ಬೇಡುತ್ತಾರೋ ಅವರ ಬೇಡಿಕೆಯನ್ನು ಅವನು ಈಡೇರಿಸುತ್ತಾನೆ ಮತ್ತು ಅವರ ಅಗತ್ಯಗಳನ್ನು ಪೂರೈಸುತ್ತಾನೆ. ಸೃಷ್ಟಿಗಳು ಹಗಲು ರಾತ್ರಿ ಪಾಪ ಮಾಡುತ್ತಾರೆ. ದಾಸನು ಅಲ್ಲಾಹನಲ್ಲಿ ಕ್ಷಮೆಯಾಚಿಸುವಾಗ ಅವನು ದಾಸನ ಪಾಪಗಳನ್ನು ಕ್ಷಮಿಸುತ್ತಾನೆ. ಅಲ್ಲಾಹನಿಗೆ ಯಾವುದೇ ತೊಂದರೆ ಮಾಡಲು ಅಥವಾ ಉಪಕಾರ ಮಾಡಲು ಸೃಷ್ಟಿಗಳಿಗೆ ಸಾಧ್ಯವಿಲ್ಲ. ಸೃಷ್ಟಿಗಳೆಲ್ಲರೂ ಅತಿಹೆಚ್ಚು ದೇವಭಯವುಳ್ಳ ವ್ಯಕ್ತಿಯ ಹೃದಯವನ್ನು ಹೊಂದಿದರೆ, ಅವರಲ್ಲಿರುವ ದೇವಭಯದಿಂದ ಅಲ್ಲಾಹನ ಆಧಿಪತ್ಯದಲ್ಲಿ ಏನೂ ಹೆಚ್ಚಾಗುವುದಿಲ್ಲ. ಸೃಷ್ಟಿಗಳೆಲ್ಲರೂ ಅತ್ಯಂತ ದುಷ್ಟ ವ್ಯಕ್ತಿಯ ಹೃದಯವನ್ನು ಹೊಂದಿದರೆ, ಅವರ ದುಷ್ಟತನದಿಂದ ಅಲ್ಲಾಹನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಏಕೆಂದರೆ ಅವರು ದುರ್ಬಲರು ಮತ್ತು ಅಲ್ಲಾಹನನ್ನು ಅವಲಂಬಿಸಿದವರು. ಎಲ್ಲಾ ಸ್ಥಿತಿ, ಕಾಲ ಮತ್ತು ಸ್ಥಳದಲ್ಲೂ ಅಲ್ಲಾಹನ ಅಗತ್ಯವಿರುವವರು. ಆದರೆ ಸರ್ವಶಕ್ತನಾದ ಅಲ್ಲಾಹು ಸೃಷ್ಟಿಗಳಲ್ಲಿ ಯಾರನ್ನೂ ಅವಲಂಬಿಸಿಲ್ಲ. ಮನುಷ್ಯರು ಮತ್ತು ಜಿನ್ನ್ಗಳಲ್ಲಿರುವ ಮೊದಲಿನವರು ಮತ್ತು ನಂತರದವರು ಸೇರಿದಂತೆ ಎಲ್ಲರೂ ಒಂದು ಸ್ಥಳದಲ್ಲಿ ನಿಂತು ಅಲ್ಲಾಹನಲ್ಲಿ ಬೇಡಿಕೆಯಿಡ ತೊಡಗಿದರೆ, ಮತ್ತು ಅಲ್ಲಾಹು ಅವರೆಲ್ಲರ ಬೇಡಿಕೆಗಳನ್ನು ಈಡೇರಿಸುತ್ತಾ ಬಂದರೆ, ಸಮುದ್ರಕ್ಕೆ ಸೂಜಿಯನ್ನು ಚುಚ್ಚಿ ಹೊರತೆಗೆದರೆ ಸಮುದ್ರದಲ್ಲಿ ಹೇಗೆ ಏನೂ ಕಡಿಮೆಯಾಗುವುದಿಲ್ಲವೋ ಹಾಗೆಯೇ ಅಲ್ಲಾಹನ ಖಜಾನೆಯಿಂದ ಏನೂ ಕಡಿಮೆಯಾಗುವುದಿಲ್ಲ. ಅಲ್ಲಾಹನ ಶ್ರೀಮಂತಿಕೆಯ ಸಂಪೂರ್ಣತೆಯೇ ಇದಕ್ಕೆ ಕಾರಣ. ಸರ್ವಶಕ್ತನಾದ ಅಲ್ಲಾಹು ದಾಸರ ಕರ್ಮಗಳನ್ನು ದಾಖಲಿಸುತ್ತಾನೆ ಮತ್ತು ಎಣಿಸಿಡುತ್ತಾನೆ. ನಂತರ ಪುನರುತ್ಥಾನ ದಿನದಂದು ಅವುಗಳಿಗೆ ಪ್ರತಿಫಲ ನೀಡುತ್ತಾನೆ. ಯಾರು ತನ್ನ ಕರ್ಮಗಳಿಗೆ ಉತ್ತಮ ಪ್ರತಿಫಲವನ್ನು ಪಡೆಯುತ್ತಾನೋ ಅವನು ಆ ಕರ್ಮಗಳನ್ನು ಮಾಡುವ ಸೌಭಾಗ್ಯ ನೀಡಿದ್ದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ. ಯಾರು ತನ್ನ ಕರ್ಮಗಳಿಗೆ ಉತ್ತಮವಲ್ಲದ ಪ್ರತಿಫಲವನ್ನು ಪಡೆಯುತ್ತಾನೋ ಅವನು, ತನ್ನನ್ನು ನಷ್ಟಕ್ಕೊಳಪಡಿಸಿದ ದುಷ್ಕರ್ಮಗಳಿಗೆ ಪ್ರೇರೇಪಿಸುವ ತನ್ನ ಮನಸ್ಸನ್ನೇ ವಿನಾ ಇನ್ನಾರನ್ನೂ ದೂಷಿಸದಿರಲಿ.
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಂದು ದಿನ ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದೆ. ಆಗ ಅವರು ಹೇಳಿದರು: "ಮಗೂ! ನಾನು ನಿನಗೆ ಕೆಲವು ವಚನಗಳನ್ನು ಕಲಿಸುತ್ತೇನೆ. ಅಲ್ಲಾಹನ ಸಂರಕ್ಷಣೆ ಮಾಡು, ಅವನು ನಿನ್ನ ಸಂರಕ್ಷಣೆ ಮಾಡುವನು. ಅಲ್ಲಾಹನ ಸಂರಕ್ಷಣೆ ಮಾಡು, ಆಗ ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣಬಹುದು. ನೀನು ಬೇಡುವುದಾದರೆ ಅಲ್ಲಾಹನಲ್ಲಿ ಬೇಡು. ನೀನು ಸಹಾಯ ಯಾಚಿಸುವುದಾದರೆ, ಅಲ್ಲಾಹನಲ್ಲಿ ಸಹಾಯ ಯಾಚಿಸು. ತಿಳಿದುಕೋ! ನಿನಗೆ ಯಾವುದಾದರೂ ಉಪಕಾರ ಮಾಡಲು ಸಂಪೂರ್ಣ ಸಮುದಾಯವು ಒಗ್ಗಟ್ಟಾದರೂ ಕೂಡ, ಅಲ್ಲಾಹು ನಿನ್ನ ಪರವಾಗಿ ಏನು ಬರೆದಿಟ್ಟಿದ್ದಾನೋ ಅದಲ್ಲದೆ ಬೇರೇನೂ ಉಪಕಾರ ಮಾಡಲು ಅವರಿಗೆ ಸಾಧ್ಯವಿಲ್ಲ. ನಿನಗೆ ಏನಾದರೂ ತೊಂದರೆ ಮಾಡಲು ಸಂಪೂರ್ಣ ಸಮುದಾಯವು ಒಗ್ಗಟ್ಟಾದರೂ ಕೂಡ, ಅಲ್ಲಾಹು ನಿನಗೆ ವಿರುದ್ಧವಾಗಿ ಏನು ಬರೆದಿಟ್ಟಿದ್ದಾನೋ ಅದಲ್ಲದೆ ಬೇರೇನೂ ತೊಂದರೆ ಮಾಡಲು ಅವರಿಗೆ ಸಾಧ್ಯವಿಲ್ಲ. ಲೇಖನಿಯನ್ನು ಎತ್ತಲಾಗಿದೆ ಮತ್ತು ಗ್ರಂಥಗಳು ಒಣಗಿವೆ."
At-Tirmidhiಇಬ್ನ್ ಅಬ್ಬಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಅವರು ಚಿಕ್ಕ ಹುಡುಗನಾಗಿದ್ದಾಗ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ ಕುಳಿತು ಪ್ರಯಾಣ ಮಾಡುತ್ತಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ನಿನಗೆ ಕೆಲವು ವಿಷಯಗಳನ್ನು ಕಲಿಸುತ್ತೇನೆ. ಅಲ್ಲಾಹು ಅವುಗಳನ್ನು ನಿನಗೆ ಪ್ರಯೋಜನಕಾರಿಯಾಗಿ ಮಾಡುವನು. ಅಲ್ಲಾಹನ ಆಜ್ಞೆಗಳನ್ನು ಪಾಲಿಸುವ ಮತ್ತು ಅವನ ನಿಷೇಧಗಳನ್ನು ತೊರೆಯುವ ಮೂಲಕ ಅವನನ್ನು ಸಂರಕ್ಷಿಸು. ಅವನು ನಿನ್ನನ್ನು ನೋಡುವಾಗ ನೀನು ಆರಾಧನೆ ಮತ್ತು ಧರ್ಮನಿಷ್ಠೆಯ ಕಾರ್ಯಗಳಲ್ಲಿರುವುದಾಗಿ ಕಾಣಬೇಕು. ನೀನು ಪಾಪ ಮತ್ತು ದುಷ್ಕೃತ್ಯಗಳಲ್ಲಿರುವುದಾಗಿ ಕಾಣಬಾರದು. ನೀನು ಹೀಗೆ ಮಾಡಿದರೆ, ಅದಕ್ಕೆ ಪ್ರತಿಫಲವಾಗಿ ಅಲ್ಲಾಹು ನಿನ್ನನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ವಿಪತ್ತುಗಳು ಉಂಟಾಗದಂತೆ ರಕ್ಷಿಸುತ್ತಾನೆ. ನೀನು ಎಲ್ಲಿಗೆ ಹೋದರೂ ನಿನ್ನ ಕಾರ್ಯಗಳಲ್ಲಿ ಅವನು ನಿನಗೆ ಸಹಾಯ ಮಾಡುತ್ತಾನೆ. ನೀನು ಏನಾದರೂ ಕೇಳಲು ಬಯಸಿದರೆ, ಅಲ್ಲಾಹನಲ್ಲಿ ಹೊರತು ಯಾರಲ್ಲೂ ಕೇಳಬೇಡ. ಏಕೆಂದರೆ ಬೇಡುವವರಿಗೆ ಉತ್ತರ ನೀಡುವವನು ಅವನು ಮಾತ್ರ. ನಿನಗೆ ಏನಾದರೂ ಸಹಾಯ ಬೇಕಾದರೆ ಅಲ್ಲಾಹನ ಹೊರತು ಯಾರಲ್ಲೂ ಸಹಾಯ ಯಾಚಿಸಬೇಡ. ಭೂಮಿಯಲ್ಲಿರುವ ಎಲ್ಲರೂ ನಿನಗೊಂದು ಉಪಕಾರ ಮಾಡಲು ಬಯಸಿ ಒಟ್ಟುಗೂಡಿದರೆ, ಅಲ್ಲಾಹು ನಿನಗೆ ನಿಗದಿಪಡಿಸಿದ ಉಪಕಾರವನ್ನಲ್ಲದೆ ಬೇರೇನನ್ನೂ ಮಾಡಲು ಅವರಿಗೆ ಸಾಧ್ಯವಿಲ್ಲ; ಮತ್ತು ಭೂಮಿಯಲ್ಲಿರುವ ಎಲ್ಲರೂ ನಿನಗೆ ತೊಂದರೆ ಮಾಡಲು ಬಯಸಿ ಒಟ್ಟುಗೂಡಿದರೆ, ಅಲ್ಲಾಹು ನಿನಗೆ ನಿರ್ಣಯಿಸಿದ ತೊಂದರೆಯನ್ನಲ್ಲದೆ ಬೇರೇನನ್ನೂ ಮಾಡಲು ಅವರಿಗೆ ಸಾಧ್ಯವಿಲ್ಲ ಎಂಬ ದೃಢವಿಶ್ವಾಸ ನಿನಗಿರಲಿ. ಸರ್ವಶಕ್ತನಾದ ಅಲ್ಲಾಹು ತನ್ನ ಯುಕ್ತಿ ಮತ್ತು ಜ್ಞಾನದ ಪ್ರಕಾರ ಇದನ್ನು ಈಗಾಗಲೇ ಲಿಖಿತಗೊಳಿಸಿದ್ದಾನೆ ಮತ್ತು ಈಗಾಗಲೇ ನಿರ್ಧರಿಸಿದ್ದಾನೆ. ಅಲ್ಲಾಹು ಲಿಖಿತಗೊಳಿಸಿದ್ದನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಸಮುದಾಯದಲ್ಲಿರುವ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ; ನಿರಾಕರಿಸಿದವನ ಹೊರತು." ಅನುಯಾಯಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! (ಸ್ವರ್ಗಕ್ಕೆ ಹೋಗಲು) ನಿರಾಕರಿಸುವವನು ಯಾರು?" ಅವರು ಉತ್ತರಿಸಿದರು: "ಯಾರು ನನ್ನ ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ಸ್ವರ್ಗಕ್ಕೆ ಹೋಗುತ್ತಾನೆ; ಮತ್ತು ಯಾರು ನನ್ನ ಆಜ್ಞೆಗಳನ್ನು ಪಾಲಿಸುವುದಿಲ್ಲವೋ ಅವನು (ಸ್ವರ್ಗಕ್ಕೆ ಹೋಗಲು) ನಿರಾಕರಿಸಿದನು."
Al-Bukhariಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರ ಸಮುದಾಯಕ್ಕೆ ಸೇರಿದ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ; ನಿರಾಕರಿಸಿದವರ ಹೊರತು! ಆಗ ಸಂಗಡಿಗರು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಕೇಳುತ್ತಾರೆ: "ಓ ಅಲ್ಲಾಹನ ಸಂದೇಶವಾಹಕರೇ! ನಿರಾಕರಿಸುವವರು ಯಾರು?!" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸುತ್ತಾ ಹೇಳುತ್ತಾರೆ: "ಯಾರು ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞಾಪಾಲನೆ ಮಾಡುತ್ತಾನೋ ಮತ್ತು ಅನುಸರಿಸುತ್ತಾನೋ ಅವನು ಸ್ವರ್ಗಕ್ಕೆ ಹೋಗುತ್ತಾನೆ; ಆದರೆ, ಯಾರು ಅವರ ಆಜ್ಞಾಪಾಲನೆ ಮಾಡುವುದಿಲ್ಲವೋ ಮತ್ತು ಧರ್ಮನಿಯಮಗಳನ್ನು ಅನುಸರಿಸುವುದಿಲ್ಲವೋ ಅವನು ತನ್ನ ದುಷ್ಕರ್ಮಗಳ ನಿಮಿತ್ತ ಸ್ವರ್ಗಕ್ಕೆ ಹೋಗಲು ನಿರಾಕರಿಸಿದ್ದಾನೆ."
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಒಂದು ಜನಸಮೂಹವನ್ನು ಅನುಕರಿಸುತ್ತಾರೋ ಅವರು ಅವರಲ್ಲಿ ಸೇರುತ್ತಾರೆ."
Abu Dawoodಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸತ್ಯನಿಷೇಧಿಗಳು, ದುಷ್ಕರ್ಮಿಗಳು ಅಥವಾ ಸಜ್ಜನರನ್ನು ಅನುಕರಿಸುವವರು—ಅಂದರೆ ವಿಶೇಷವಾಗಿ ಅವರಲ್ಲಿರುವ ಯಾವುದಾದರೂ ನಂಬಿಕೆ, ಆರಾಧನೆ ಅಥವಾ ಸಂಪ್ರದಾಯವನ್ನು ಅನುಕರಿಸುವವರು ಅವರಲ್ಲಿ ಸೇರುತ್ತಾರೆ. ಏಕೆಂದರೆ ಬಾಹ್ಯವಾಗಿ ಅವರನ್ನು ಅನುಕರಿಸುವುದು ಅಂತರಂಗದಲ್ಲೂ ಅವರನ್ನು ಅನುಕರಿಸಲು ಕಾರಣವಾಗುತ್ತದೆ. ನಿಸ್ಸಂದೇಹವಾಗಿಯೂ, ಒಂದು ಜನಸಮೂಹವನ್ನು ಅನುಕರಿಸಲು ಅವರ ಬಗ್ಗೆ ಮೆಚ್ಚುಗೆಯನ್ನು ಹೊಂದಿರುವುದೇ ಕಾರಣವಾಗಿದೆ. ಇದು ಅವರನ್ನು ಪ್ರೀತಿಸಲು, ಅತಿಯಾಗಿ ಗೌರವಿಸಲು ಮತ್ತು ಅವರ ಕಡೆಗೆ ಆಕರ್ಷಿತರಾಗಲು ಕಾರಣವಾಗಬಹುದು. ಇದು ಅವರನ್ನು ಆಂತರಿಕವಾಗಿಯೂ ಮತ್ತು ಅವರು ಮಾಡುವ ಆರಾಧನೆಗಳಲ್ಲಿಯೂ ಅವನ್ನು ಅನುಕರಿಸಲು ಕಾರಣವಾಗಬಹುದು.ಅಲ್ಲಾಹು ಕಾಪಾಡಲಿ.
No Benefits found for this category